Home ಟಾಪ್ ಸುದ್ದಿಗಳು ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬಿದ್ದು ಯಾರು ?, ಮುಸ್ಲಿಮರು ಜೆಡಿಎಸ್ ಪಕ್ಷವನ್ನು ಉಳಿಸಬೇಕು: ಮಾಜಿ...

ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬಿದ್ದು ಯಾರು ?, ಮುಸ್ಲಿಮರು ಜೆಡಿಎಸ್ ಪಕ್ಷವನ್ನು ಉಳಿಸಬೇಕು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು: ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬಿದ್ದು ಯಾರು ? ರೆಸಿಡೆನ್ಸಿ ಶಾಲೆ ಕೊಟ್ಟವರು ಯಾರು ? ಎಂಬುದನ್ನು ಮುಸ್ಲಿಮರು ದಯವಿಟ್ಟು ನೆನಪಿಸಿಕೊಳ್ಳಬೇಕು. ಜೆಡಿಎಸ್ ಪಕ್ಷವನ್ನು ಉಳಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ.

ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಇನ್ನು ಹೋರಾಟ ಮಾಡುವ ಶಕ್ತಿ ಇದೆ. ಕಾರ್ಯಕ್ರಮದಲ್ಲಿ ಬಂದು 4 ನಿಮಿಷ ಮಾತನಾಡಿ ಎಂದು ಹೇಳಿದ್ದಾರೆ. ಆದರೆ ನಾನು ಸಂಪೂರ್ಣವಾಗಿ ಅರ್ಧ ಗಂಟೆ ಮಾತನಾಡುವೆ. ಕುಮಾರಸ್ವಾಮಿ ಅವರು ನಮ್ಮ ಪಕ್ಷವನ್ನು ಉಳಿಸಲು 10 ವರ್ಷಗಳಿಂದ ಯಾವ ಯಾವ ಕಾರ್ಯಕ್ರಮ ಮಾಡಿದ್ದಾರೆ ಎಂದು ಗೊತ್ತು. ಆದರೆ ಈಗ ಹಿಂದಿನ ವಿಚಾರಗಳನ್ನು ಮಾತನಾಡಲು ನಾನು ಇಷ್ಟ ಪಡುವುದಿಲ್ಲ ಎಂದರು.

ನನ್ನ ಆರೋಗ್ಯ ಇನ್ನು ಸ್ವಲ್ಪ ಚೇತರಿಸಿಕೊಳ್ಳಬೇಕು. ನಾನು ಈ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ. ನಾವು ನೀವೆಲ್ಲರೂ ಸೇರಿ ಈ ಪಕ್ಷ ಉಳಿಸಬೇಕಿದೆ ದಯವಿಟ್ಟು ಪಕ್ಷಕ್ಕೆ ಶಕ್ತಿ ನೀಡಿ ಎಂದು ದೇವೇಗೌಡ ಮನವಿ ಮಾಡಿದರು.

ನಾನು ಮುಂಬರುವ ಕಾರ್ಯಕಾರಣಿ ಸಭೆಯಲ್ಲೂ ಭಾಗಿಯಾಗುತ್ತೇನೆ. ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ. ಹೇಳಿಕೆ ಕೊಟ್ಟ ಮೇಲೆ ನಾವು ಕಾರ್ಯಗತ ಮಾಡಲೇಬೇಕು. ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೇವೆ ಎಂದು ನಾವು ಹೇಳಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಮೇಲೆ ಆದ್ಯತೆಯ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡುವ ಕೆಲಸ ಮಾಡಿತು. ಈ ಪಕ್ಷ ಉಳಿಸಿ ಬೆಳೆಸಿ ಎಂದು ಕೈ ಮುಗಿದು ಮನವಿ ಮಾಡುತ್ತೇನೆ ಎಂದರು.

ನನ್ನ ಕಣ್ಣ ಮುಂದೆ ಜೆ ಡಿ ಎಸ್ ಅಧಿಕಾರಕ್ಕೆ ಬರುವುದು ಸತ್ಯ, ಮತ್ತೆ ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತಾರೆ. ಇದು ನಡೆದೇ ನಡೆಯುತ್ತದೆ. ಯಾರಿಗೂ ಸಂಶಯ ಬೇಡ ಎಂದು ಅವರು ಹೇಳಿದರು.
ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ , ಕೊನೆಯವರೆಗೂ ರಾಜ್ಯದ ನೆಲ ಜಲದ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ನಾನು ಸಿಎಂ ಆಗಿದ್ದಾಗ ರಾಜ್ಯದಲ್ಲಿ 16 ಲೋಕಸಭಾ ಸ್ಥಾನ ಬಂತು. ಆಗ ಕೆಲವರು ಕುಮಾರಸ್ವಾಮಿ ಅವರನ್ನು ಹಠ ಮಾಡಿ ನೀವು ಲೋಕಸಭೆಗೆ ಹೋಗಿ ಅಂದ್ರು, ಅದರಂತೆ ಚುನಾವಣೆಯಲ್ಲಿ ಗೆದ್ದು ಅವರು ಲೋಕಸಭೆಗೆ ಹೋದರು. ನಮ್ಮ ಪಕ್ಷ ತೊರೆದು ಹೊರಗಡೆ ಹೋದವರು ತುಂಬಾ ಜನ ಇದ್ದಾರೆ, ನನ್ನ ಬಗ್ಗೆ ಯಾರು ಏನೇ ಮಾತಾಡಿದರೂ ಪಕ್ಷ ಉಳಿಸಲು ನೀವು ಶಕ್ತಿ ಕೊಡಬೇಕು. ನಾನು ಇದ್ದೇನೆ ಎಂದು ತೋರಿಸಲು ಇಲ್ಲಿ ಕರೆದುಕೊಂಡು ಬಂದಿದ್ದಾರೆ ಎಂಬ ಭಾವನೆ ಬೇಡ. ಇನ್ನು ಹೋರಾಟ ಮಾಡುವೆ ನಾವು ನೀವೆಲ್ಲರೂ ಸೇರಿ ಈ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ದೇವೇಗೌಡ ಹೇಳಿದರು.

Join Whatsapp
Exit mobile version