Home ಕ್ರೀಡೆ ಕಂಠೀರವದಲ್ಲಿ ಏಕಕಾಲದಲ್ಲಿ ಪ್ರೊ ಕಬಡ್ಡಿ, ಐಎಸ್‌ಎಲ್‌ ಫುಟ್‌ಬಾಲ್‌ !

ಕಂಠೀರವದಲ್ಲಿ ಏಕಕಾಲದಲ್ಲಿ ಪ್ರೊ ಕಬಡ್ಡಿ, ಐಎಸ್‌ಎಲ್‌ ಫುಟ್‌ಬಾಲ್‌ !

ಬೆಂಗಳೂರು: ಉದ್ಯಾನ ನಗರಿಯ ಕ್ರೀಡಾಪ್ರೇಮಿಗಳಿಗೆ ಶನಿವಾರ ಡಬಲ್‌ ಧಮಾಕ. ಪ್ರೊ ಕಬಡ್ಡಿ ಲೀಗ್‌ ಮತ್ತು ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿ ಪಂದ್ಯಗಳು ಏಕಕಾಲಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೊರಾಂಗಣ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಶನಿವಾರ, ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು ಎದುರಿಸಲಿದೆ. ಡುರಾಂಡ್ ಕಪ್ ಗೆದ್ದು ಭರ್ಜರಿ ಫಾರ್ಮ್‌ನಲ್ಲಿರುವ ಸುನಿಲ್‌ ಛೆಟ್ರಿ ಸಾರಥ್ಯದ ಬೆಂಗಳೂರು ತಂಡ, ತವರು ಮೈದಾನದಲ್ಲಿ ನಡೆಯುವ  ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ರಾತ್ರಿ 7.30ಕ್ಕೆ ಪಂದ್ಯ ಪ್ರಾರಂಭವಾಗುವ ಈ ಪಂದ್ಯವು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದೇ ಸಯಮಯದಲ್ಲಿ ಇದೇ ಮೈದಾನದ ಮುಂಭಾಗದಲ್ಲಿರುವ ಕಂಠೀರವ  ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್‌ ಹಂತದ ಪಂದ್ಯಗಳು ನಡೆಯಲಿದೆ.

9ನೇ ಆವೃತ್ತಿಯ ಐಎಸ್‌ಎಲ್ ಟೂರ್ನಿಗೆ ಶುಕ್ರವಾರ ಕೇರಳದ ಕೊಚ್ಚಿಯಲ್ಲಿ ಚಾಲನೆ ದೊರೆತಿದೆ. ಮತ್ತೊಂದೆಡೆ 12 ತಂಡಗಳು ಭಾಗವಹಿಸುತ್ತಿರುವ ಪ್ರೊ ಕಬಡ್ಡಿ ಲೀಗ್‌ನ ಒಂಬತ್ತನೇ ಆವೃತ್ತಿಯ ಮೊದಲ ಚರಣ ಶುಕ್ರವಾರದಿಂದ  ಬೆಂಗಳೂರಿನಲ್ಲಿ ಆರಂಭವಾಗಿದೆ.  ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡ, ಯು ಮುಂಬಾ ವಿರುದ್ಧ 41-27 ಅಂಕಗಳ ಅಂತರದಲ್ಲಿ ಜಯ ಗಳಿಸುವ ಮೂಲಕ ಶುಭಾರಂಭ ಮಾಡಿದೆ. ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್‌, 34– 29 ಅಂಕಗಳ ಅಂತರದಿಂದ ತೆಲುಗು ಟೈಟನ್ಸ್‌ ಸವಾಲನ್ನು ಮೀರಿ ನಿಲ್ಲುವಲ್ಲಿ ಯಶಸ್ವಿಯಾಗಿತ್ತು.

ಮತ್ತೊಂದೆಡೆ ಕೊಚ್ಚಿಯ ಜವಾಹರ್‌ಲಾಲ್‌ ನೆಹರೂ ಮೈದಾನದಲ್ಲಿ ನಡೆದ ಐಎಸ್‌ಎಲ್‌ ಉದ್ಘಾಟನಾ ಪಂದ್ಯದಲ್ಲಿ ಕಳೆದ ಆವೃತ್ತಿಯ ರನ್ನರ್ -ಅಪ್, ಮಾಜಿ ಚಾಂಪಿಯನ್ ಕೇರಳ ಬ್ಲಾ ಸ್ಟರ್ಸ್‌, ಈಸ್ಟ್ ಬೆಂಗಾಲ್ ವಿರುದ್ಧ 3-1 ಗೋಲುಗಳ  ಅಂತರದಲ್ಲಿ ಗೆಲುವು ಸಾಧಿಸಿತು. ಕೇರಳ ಪರ ಆಡ್ರಿಯನ್ ಲೂನಾ 72 ನೇ ನಿಮಿಷ, ಇವಾನ್ ಕಲ್ಯುಜ್ನಿ 82, ಮತ್ತು 89ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಈಸ್ ಬೆಂಗಾಲ್ ಪರ 88ನೇ ನಿಮಿಷದಲ್ಲಿ ಅಲೆಕ್ಸ್‌ ಏಕೈಕ ಗೋಲು ಗಳಿಸಿದರು.

ಕಳೆದ ಆವೃತ್ತಿಯಲ್ಲಿ ಬಿಎಫ್‌ಸಿ 6ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿತ್ತು. ಮತ್ತೊಂದೆಡೆ 11 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ನಾರ್ಥ್ಈಸ್ಟ್‌ ತಂಡ ,ಕೇವಲ 3 ಗೆಲುವು ದಾಖಲಿಸಿ 10ನೇ ಸ್ಥಾನಕ್ಕೆ ಕುಸಿದಿತ್ತು.

ಇಂದಿನ ಪಂದ್ಯಗಳು

ಐಎಸ್‌ಎಲ್‌| ಬೆಂಗಳೂರು ಎಫ್‌ಸಿ vs ನಾರ್ಥ್ಈಸ್ಟ್‌ ಯುನೈಟೆಡ್‌

ಪ್ರೊ ಕಬಡ್ಡಿ ಲೀಗ್‌|

1.ಪಾಟ್ನಾ ಪೈರೈಟ್ಸ್‌ vs ಪುಣೇರಿ ಪಲ್ಟನ್‌

2. ಗುಜರಾತ್‌ ಜೈಂಟ್ಸ್‌ vs ತಮಿಳ್‌ ತಲೈವಾಸ್

3. ‌ಬೆಂಗಾಲ್‌ ವಾರಿಯರ್ಸ್‌ vs ಹರ್ಯಾಣ ಸ್ಟೀಲರ್ಸ್‌

Join Whatsapp
Exit mobile version