Home ಟಾಪ್ ಸುದ್ದಿಗಳು ಎಲ್ಲಿ ಗಲಭೆ ನಡೆದರೂ ಅದನ್ನು ಎಸ್ ಡಿಪಿಐ ತಲೆಗೆ ಕಟ್ಟುವುದು ಬಿಜೆಪಿ ನಾಯಕರಿಗೆ ಚಾಳಿ: ಅಬ್ದುಲ್...

ಎಲ್ಲಿ ಗಲಭೆ ನಡೆದರೂ ಅದನ್ನು ಎಸ್ ಡಿಪಿಐ ತಲೆಗೆ ಕಟ್ಟುವುದು ಬಿಜೆಪಿ ನಾಯಕರಿಗೆ ಚಾಳಿ: ಅಬ್ದುಲ್ ಮಜೀದ್ ಮೈಸೂರು

ಸಂಘಪರಿವಾರದ ಶವ ಮೆರವಣಿಗೆಯ ಕರಾಳ ಇತಿಹಾಸ ಗೊತ್ತಿದ್ದೂ, ಪೊಲೀಸರು ಅವಕಾಶ ಕೊಟ್ಟು ಅಹಿತಕರ ಘಟನೆಗೆ ಕಾರಣರಾಗಿದ್ದಾರೆ

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ಶವ ಯಾತ್ರೆಯ ಹೆಸರಿನಲ್ಲಿ ದಾಂಧಲೆ ನಡೆಸಿದ ಸಂಘಪರಿವಾರ ಕಾರ್ಯಕರ್ತರ ಕೃತ್ಯ ಖಂಡನೀಯ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.

ಈ ಹಿಂದೆಯೂ ಸಂಘಪರಿವಾರ, ಶವ ಯಾತ್ರೆಯ ಹೆಸರಿನಲ್ಲಿ ದುಷ್ಕೃತ್ಯ ನಡೆಸಿದ ಇತಿಹಾಸವಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಶವ ಯಾತ್ರೆಗೆ ಅನುಮತಿ ನೀಡಬಾರದೆಂದು ಎಸ್ ಡಿಪಿಐ ಮೊದಲೇ ಎಚ್ಚರಿಕೆ ನೀಡಿತ್ತು. ಆದರೆ ದ.ಕ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದನ್ನು ನಿರ್ಲಕ್ಷ್ಯಿಸಿದ್ದರಿಂದ ನಿರೀಕ್ಷೆಯಂತೆ ಸಂಘಪರಿವಾರ ಕಾರ್ಯಕರ್ತರು ಶವ ಯಾತ್ರೆಯ ನಡುವೆ ಬೆಳ್ಳಾರೆ ಮಸೀದಿಗೆ, ಅಂಗಡಿಗಳಿಗೆ ಕಲ್ಲೆಸೆತ, ನಿಂತಿಕಲ್ ಎಂಬಲ್ಲಿ ಮುಸ್ಲಿಂ ಯುವಕನೋರ್ವನಿಗೆ ಥಳಿಸಿ ಇನ್ನೊಬ್ಬ ಮುಸ್ಲಿಂ ಯುವಕನ ಬೈಕ್ ಅನ್ನು ಧ್ವಂಸಗೊಳಿಸಿದ್ದಲ್ಲದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ಪುತ್ತೂರು ಹಾಗೂ ಸುಳ್ಯ ತಾಲೂಕಿನಾದ್ಯಂತ ಅರಾಜಕತೆ ಸೃಷ್ಟಿಸಿದ್ದಾರೆ. ದ.ಕ. ಜಿಲ್ಲಾಡಳಿತವೇ ಈ ಘಟನೆಗೆ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ.

ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನ ಪ್ರವೀಣ್ ಹತ್ಯೆ ಕೃತ್ಯವೂ ಖಂಡನೀಯವಾಗಿದೆ. ನೈಜ ಆರೋಪಿಗಳನ್ನು ಪೋಲಿಸ್ ಇಲಾಖೆ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮಸೀದಿಗೆ, ಅಂಗಡಿಗಳಿಗೆ ಹಾಗೂ ಸರ್ಕಾರಿ ಬಸ್ ಗಳಿಗೆ ಕಲ್ಲೆಸೆದು ದಾಂಧಲೆ ನಡೆಸಿದ ಸಂಘಪರಿವಾರ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಪುತ್ತೂರಿನಿಂದ ಪ್ರವೀಣ್ ಅವರ ಮನೆಯಾದ ನೆಟ್ಟಾರಿಗೆ ತಲುಪಲು ಕುಂಬ್ರ ರಸ್ತೆ ಅತೀ ಸಮೀಪದ ಮಾರ್ಗವಾಗಿದ್ದರೂ ಅದನ್ನು ಬಿಟ್ಟು ಪುತ್ತೂರು-ಸವಣೂರು-ಕಾಣಿಯೂರು-ಪುಂಚತ್ತಾರು-ನಿಂತಿಕಲ್ಲು-ಬೆಳ್ಳಾರೆಯ ಸುತ್ತು ಬಳಸಿದ ಮಾರ್ಗದ ಮೂಲಕ ಶವ ಯಾತ್ರೆ ಕೈಗೊಂಡದ್ದನ್ನು ಗಮನಿಸುವಾಗ ಇದು ಗಲಭೆ ನಡೆಸಲೆಂದೇ ಉದ್ದೇಶಪೂರ್ವಕವಾಗಿ ಸಂಘಪರಿವಾರ ವ್ಯವಸ್ಥಿತವಾಗಿ ಷಡ್ಯಂತರ ರೂಪಿಸಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಅವರು ದೂರಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಕೆಲವು ಬಿಜೆಪಿ ನಾಯಕರು ಈ ಪ್ರಕರಣದಲ್ಲಿ ಎಸ್ ಡಿಪಿಐಯನ್ನು ತಳಕು ಹಾಕಿಕೊಳ್ಳುವ ಪ್ರಯತ್ನಿಸುತ್ತಿರುವುದು ಖಂಡನೀಯವಾಗಿದೆ. ಇನ್ನೂ ಕೂಡ ಪೋಲಿಸ್ ಇಲಾಖೆ ಅಧಿಕೃತವಾಗಿ ಯಾರನ್ನು ಬಂಧಿಸಿಲ್ಲ ಹಾಗೂ ಪ್ರಾಥಮಿಕ ತನಿಖೆಯನ್ನೇ ಪೂರ್ಣ ಗೊಳಿಸಿಲ್ಲ. ಆದರೆ ಇದರ ಮಧ್ಯೆಯೇ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದರ ಹಿಂದೆ ಎಸ್ ಡಿಪಿಐ ಪಕ್ಷವನ್ನು ಗುರಿ ಪಡಿಸುವ ಷಡ್ಯಂತರ ಹಾಗೂ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಎಲ್ಲಿ ಗಲಭೆ ನಡೆದರೂ ಅದನ್ನು ಎಸ್ ಡಿಪಿಐ ತಲೆಗೆ ಕಟ್ಟುವುದು ಬಿಜೆಪಿ ನಾಯಕರಿಗೆ ಚಾಳಿಯಾಗಿ ಬಿಟ್ಟಿದೆ. ನಂತರ ಅದರ ತನಿಖೆ ಪೂರ್ಣ ಗೊಂಡಾಗ ಸಂಘಪರಿವಾರದ ಕಾಲ ಬುಡಕ್ಕೆ ಬಂದದ್ದು ಜನರು ಮರೆತಿಲ್ಲ. ಒಂದೂವರೆ ತಿಂಗಳ ಹಿಂದೆ ಬೆಳ್ಳಾರೆ ಸಮೀಪದ ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ಎಂಬ ಹಿಂದೂ ಯುವಕನನ್ನು ಹಾಗೂ ಒಂದು ವಾರದ ಹಿಂದೆ ಕಳಂಜದ ಮಸೂದ್ ಎಂಬ ತಂದೆ ಇಲ್ಲದ ಅನಾಥ ಮುಸ್ಲಿಂ ಹುಡುಗನನ್ನು ಸಂಘಪರಿವಾರ ಗೂಂಡಾಗಳು ಹತ್ಯೆ ನಡೆಸಿದ ಸಂದರ್ಭದಲ್ಲಿ ಮೌನ ವಹಿಸಿದ್ದ ಬಿಜೆಪಿ ನಾಯಕರು, ಶಾಸಕರು, ಸಚಿವರು ಹಾಗೂ ಗೃಹ ಸಚಿವರು, ಪ್ರವೀಣ್ ಹತ್ಯೆಯನ್ನು ವೈಭವೀಕರಿಸಿ ಪ್ರಚೋದನಾಕಾರಿ ಹೇಳಿಕೆ ನೀಡುವುದರ ಹಿಂದೆ ಇವರ ಕೋಮು ಮನಸ್ಥಿತಿ ಹಾಗೂ ಹಿಂದು ವೋಟ್ ಬ್ಯಾಂಕ್ ಅನ್ನು ಗಟ್ಟಿಗೊಳಿಸಲು ಯತ್ನಿಸುತ್ತಿರುವುದು ಕಾಣುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಹಾಗಾಗಿ ದ.ಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ತೊಡಕಾಗಿರುವ ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಹಾಗೂ ಪ್ರವೀಣ್ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಶಾಂತಿ ಸುವ್ಯವಸ್ಥೆಯನ್ನು ಖಾತರಿ ಪಡಿಸಬೇಕೆಂದು ಅಬ್ದುಲ್ ಮಜೀದ್ ಪತ್ರಿಕಾ ಹೇಳಿಕೆಯಲ್ಲಿ ದ.ಕ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version