ಮಹಿಳಾ ಕುಲಕ್ಕೆ ಅವಮಾನ ಮಾಡಿದ ಚೈತ್ರಾ ಕುಂದಾಪುರ ಮದುವೆ ಯಾವಾಗ ? ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಪ್ರಶ್ನೆ

Prasthutha|

ಮಂಗಳೂರು : ಸುರತ್ಕಲ್ ನಲ್ಲಿ ಚೈತ್ರಾ ಕುಂದಾಪುರ ಎಂಬವರು ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡಿರುವುದು ಹೆಣ್ಣಾದ ಆಕೆಗೆ ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.

- Advertisement -


ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 35 ವರ್ಷವಾದರೂ ಮದುವೆಯಾಗಿಲ್ಲ ಎಂದು ಬಂಟ ಹೆಣ್ಣಿನ ಬಗ್ಗೆ ಚೈತ್ರಾ ಹೇಳಿಕೆ ನೀಡಿದ್ದಾರೆ. ಹಿಂದೂ ಎನ್ನುವ ನಿಮಗೆ ಹಿಂದೂ ಸಂಸ್ಕೃತಿಯ ಅರಿವಿಲ್ಲ. ನಿಮ್ಮ ಪಕ್ಷದ ಸಂಸದೆ ಶೋಭಾ ಕರಂದ್ಲಾಜೆಯವರು 55 ವರುಷವಾದರೂ ಏಕೆ ಮದುವೆಯಾಗಿಲ್ಲ ಎಂದು ನಾವು ಕೇಳಬಹುದೇ ಎಂದು ಶೆಟ್ಟಿ ಕೇಳಿದರು.
ನಿಮ್ಮ ಪಕ್ಷದ ಅಧ್ಯಕ್ಷರು ಬಂಟರು, ಸುರತ್ಕಲ್ ಶಾಸಕರು ಬಂಟರು. ಅಂಥದ್ದರಲ್ಲಿ ನೀವು ಬಂಟರ ಹೆಣ್ಣನ್ನು ಅವಮಾನ ಮಾಡುವಂತೆ ಮಾತನಾಡಲು ಹೇಳಿದವರು ಯಾರು? ನೀವು ಕೋಟಿ ಚೆನ್ನಯ ದೈವ ಸ್ವರೂಪಿ ಯಮಳರ ಕೈಯ ಸುರಿಯವನ್ನು ತಲವಾರಿಗೆ ಹೋಲಿಸಿದ್ದೀರಿ. ಬಂಟ ಬಲ್ಲವರನ್ನು ಬಡಿದಾಡಿಸುವ ಹುನ್ನಾರವೇ ಎಂದು ಶಕುಂತಲಾ ಶೆಟ್ಟಿ ಪ್ರಶ್ನಿಸಿದರು.


ಹೆಣ್ಣು ಮಕ್ಕಳ ಮೇಲೆ ಎಲ್ಲ ಕಡೆ ಬಿಜೆಪಿ ಆಡಳಿತದಲ್ಲಿ ದೌರ್ಜನ್ಯ ಹೆಚ್ಚಿದೆ. ಅದನ್ನು ತಡೆಯಲು ಚೈತ್ರಾ ಹೋರಾಡಲಿ. ನಾವೂ ಬರುತ್ತೇವೆ. ಇನ್ನು ಲವ್ ಜಿಹಾದ್ ನನಗೆ ಗೊತ್ತಿಲ್ಲ. ನನ್ನ ನೆರೆಕರೆಯ ಮುಸ್ಲಿಮರು ನನಗೆ ನಾನು ಬಿಜೆಪಿಯಲ್ಲಿ ಇರುವಾಗಲೂ ನೆರವಾಗಿದ್ದಾರೆ. ಹೀಗಿರುವಾಗ ಪ್ರೀತಿ ಎಂಬುದು ಅಕ್ಕ ತಮ್ಮ, ತಾಯಿ ಮಗ ಮೊದಲಾದ ಸಂಬಂಧಗಳಲ್ಲಿ ಕೂಡಾ ಇರುತ್ತದೆ. ಲವ್ ಹೃದಯಗಳದ್ದು, ಜಿಹಾದ್ ನದಲ್ಲ ಎಂದು ಶಕುಂತಲಾ ಶೆಟ್ಟಿ ತಿರುಗೇಟು ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಶಾಲೆಟ್ ಪಿಂಟೋ, ಮಮತಾ ಗಟ್ಟಿ, ಅಪ್ಪಿ, ಗೀತಾ ಅತ್ತಾವರ, ತನ್ವೀರ್ ಶಾ, ಮಲ್ಲಿಕಾ, ಚಂದ್ರಕಲಾ ಜೋಗಿ, ಸುರೇಖಾ ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version