Home ಟಾಪ್ ಸುದ್ದಿಗಳು ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

ಸಚಿವ ಅಶ್ವಥ್ ನಾರಾಯಣ ರಾಜೀನಾಮೆಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

ಪಿಎಸ್ಐ ನೇಮಕಾತಿ ಅಕ್ರಮ: ತಪ್ಪೆಸಗಿದವರಿಗೆ ಶಿಕ್ಷೆಯಾಗಲಿ

ಬೆಂಗಳೂರು: ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಇದರಲ್ಲಿ ಹಲವು ಸಚಿವರ ಪಾತ್ರವಿದೆ.ಸಚಿವ ಅಶ್ವತ್ಥ ನಾರಾಯಣ ಕೂಡಲೇ ರಾಜೀನಾಮೆ ನೀಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಬಿಜೆಪಿ ಬಹುತೇಕ ಮುಖಂಡರು ನೇಮಕಾತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಸಿವಿಲ್‌ ಎಂಜಿನಿಯರ್‌, ಪ್ರಾಧ್ಯಾಪಕರು, ಪಿಎಸ್‌ಐ ಹಾಗೂ ನವೋದಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಆಯ್ಕೆಯಂತಹ ಪ್ರಮುಖ ಪರೀಕ್ಷೆಯಲ್ಲಿಯೂ ಬಿಜೆಪಿಯ ಪ್ರಮುಖರು ನಕಲಿ ಮಾಡಿಸಿ ತಮಗೆ ಬೇಕಾದವರಿಗೆ ನೌಕರಿ ಕೊಡಿಸುವ ದಂಧೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನಿಜವಾಗಿ ಶ್ರಮ ವಹಿಸಿ ಓದಿದ ಪ್ರತಿಭಾನ್ವಿತರಿಗೆ ಅನ್ಯಾಯವಾಗಿದೆ. ಸಚಿವ ಅಶ್ವಥ ನಾರಾಯಣ ಅವರ ಸಹೋದರರ ಪಾತ್ರವಿದ್ದು ಸರಕಾರ ಕೂಡಲೇ ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರ ರಿಂದ ತನಿಖೆ ನಡೆಸಬೇಕು. ಈ ಹಿಂದೆ ಕೆಪಿಎಸ್ಸಿಯಲ್ಲಿ ನಡೆದ ಹಗರಣದಲ್ಲಿ ನೇಮಕವಾದವರನ್ನು ಕೈ ಬಿಟ್ಟಂತೆ ಈಗಲೂ ಪಿಎಸ್‌ಐ ನೇಮಕಾತಿ ಕೈ ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದೇಶದಲ್ಲೇ ಅತಿ ಭ್ರಷ್ಟ 40 ಪರ್ಸೆಂಟ್‌ ಸರಕಾರ ರಾಜ್ಯದಲ್ಲಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಇತರ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.ನೇಮಕಾತಿ ವಿಭಾಗದ ಎಐಡಿಜಿಯನ್ನು ಸರಕಾರ ವರ್ಗಾವಣೆ ಮಾಡಿರುವುದನ್ನು ನೋಡಿದರೆ ಇದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದರು.

ಪ್ರಧಾನಿ ಮೋದಿ ಅವರು “ನಾನು ತಿನ್ನೋದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ’ ಎನ್ನುತ್ತಿದ್ದರು. ಆದರೆ ಈ ಬಗ್ಗೆ ಅವರು ಮಾತನಾಡುತ್ತಿಲ್ಲ. ಪ್ರಧಾನಿ ಕಚೇರಿ ಯಿಂದಲೇ ಇಂಥ ಅಕ್ರಮಗಳ ಪಾಲನೆ ಪೋಷಣೆ ಆಗುತ್ತಿದೆಯೇ ಎಂಬ ಶಂಕೆ ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version