Home ಟಾಪ್ ಸುದ್ದಿಗಳು ದುರ್ಬಲಗೊಂಡ ರೂಪಾಯಿ ಮೌಲ್ಯ: ಸಂಸತ್’ನಲ್ಲಿ ವಾಗ್ವಾದ

ದುರ್ಬಲಗೊಂಡ ರೂಪಾಯಿ ಮೌಲ್ಯ: ಸಂಸತ್’ನಲ್ಲಿ ವಾಗ್ವಾದ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸೋಮವಾರ ರೂಪಾಯಿಯನ್ನು ದುರ್ಬಲಗೊಳಿಸಿದ ಬಿಜೆಪಿ ಸರಕಾರದ ವಿರುದ್ಧ ಪ್ರತಿ ಪಕ್ಷ ಸದಸ್ಯರು ವಾಗ್ದಾಳಿ ನಡೆಸಿದರು. ಇದರಿಂದ ಸದನದಲ್ಲಿ ಬಿಸಿ ಬಿಸಿ ವಾಗ್ವಾದಗಳಿಗೆ ಕಾರಣವಾಯಿತು.

ಹೊಸದಾಗಿ ಲೋಕ ಸಭೆಗೆ ಆಯ್ಕೆಯಾದ ಡಿಂಪಲ್ ಯಾದವ್ ಅವರು ಪ್ರಶ್ನೋತ್ತರ ವೇಳೆ ಆರಂಭವಾಗುವಾಗ ಪ್ರಮಾಣವಚನ ಸ್ವೀಕರಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ರೂಪಾಯಿಗೆ ಬೆಲೆಯಿಲ್ಲದಂತೆ ಮಾಡಿದ್ದೀರಿ ಎಂದು ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಹರಿಹಾಯ್ದರು.

ಇದನ್ನು ಅಲ್ಲಗಳೆದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ನಮ್ಮ ರೂಪಾಯಿ ಜಾಗತಿಕವಾಗಿ ಇನ್ನೂ ಬಲಿಷ್ಟವಾಗಿದೆ ಎಂದು ಹೇಳಿದರು.

ರಾಜ್ಯ ಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಧ್ಯಾಹ್ನದ ಊಟಕ್ಕೆ ಮೊದಲು ದೊಡ್ಡ ವಾಗ್ವಾದವಾಯಿತು.

ಎಎಪಿ ಸಂಸದ ಸಂಜಯ್ ಸಿಂಗ್ ಅವರು ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ಬಿಜೆಪಿ ಸರಕಾರವು ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸಲು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಳೆದ ಎಂಟು ವರ್ಷಗಳ ಮೋದಿಯವರ ಆಡಳಿತದಲ್ಲಿ ಇ.ಡಿ. ದೇಶದೆಲ್ಲೆಡೆ ಪ್ರತಿ ಪಕ್ಷದ 3,000 ಜನರ ನಿವಾಸಗಳ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದರು. ಗೊಂದಲ, ಗದ್ದಲ ಉಂಟಾದುದರಿಂದ ರಾಜ್ಯ ಸಭೆಯನ್ನು ಮಧ್ಯಾಹ್ನದ ಭೋಜನವಿರಾಮಕ್ಕೆ ಮುಂದೂಡಲಾಯಿತು.

ಇನ್ನೂ ಲೋಕಸಭೆಯಲ್ಲಿ ಎಸ್ ಸಿ/ ಎಸ್ ಟಿ ಎರಡನೆಯ ತಿದ್ದುಪಡಿ ಆದೇಶಗಳು, ಇಂಧನ ಬಳಕೆ ತಿದ್ದುಪಡಿ ಮಸೂದೆ, ಕಡಲ ದಾರಿ ಕಳ್ಳತನ ತಡೆ ಮಸುದೆ ಇತ್ಯಾದಿ ಚರ್ಚೆಗೆ ಬರಬೇಕಾಗಿದೆ.

ಡಿಸೆಂಬರ್ 29ರಂದು ಚಳಿಗಾಲದ ಅಧಿವೇಶನ ಕೊನೆಗೊಳ್ಳುತ್ತದೆ.

Join Whatsapp
Exit mobile version