Home ಟಾಪ್ ಸುದ್ದಿಗಳು ಬಿಜೆಪಿಯವರಿಗೆ ತ್ರಿವರ್ಣ ಧ್ವಜಕ್ಕೆ ಗೌರವ ನೀಡುವ ಬುದ್ಧಿ ಬಂದಿರುವುದಕ್ಕೆ ನಾವು ಸಂತೋಷಪಡಬೇಕು: ಡಿ.ಕೆ.ಶಿವಕುಮಾರ್

ಬಿಜೆಪಿಯವರಿಗೆ ತ್ರಿವರ್ಣ ಧ್ವಜಕ್ಕೆ ಗೌರವ ನೀಡುವ ಬುದ್ಧಿ ಬಂದಿರುವುದಕ್ಕೆ ನಾವು ಸಂತೋಷಪಡಬೇಕು: ಡಿ.ಕೆ.ಶಿವಕುಮಾರ್

ಬೆಂಗಳೂರು: ಸ್ವಾತಂತ್ರ್ಯ ಕೇವಲ ಒಂದು ಪಕ್ಷಕ್ಕೆ ಸೇರಿದ್ದು ಎಂದು ನಾವು ಎಲ್ಲೂ ಹೇಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಇತಿಹಾಸ ನಮ್ಮ ಪಕ್ಷಕ್ಕೆ ಇದೆ. ನಮ್ಮ ನಾಯಕರು ಸ್ವಾತಂತ್ರ್ಯ ತಂದುಕೊಟ್ಟು ಈ ದೇಶವನ್ನು ಕಟ್ಟಿದ್ದಾರೆ. ನಮ್ಮ ಪಕ್ಷಕ್ಕೆ ಇತಿಹಾಸವಿದೆ. ಇದನ್ನು ದೇಶದುದ್ದಗಲಕ್ಕೂ ಯುವ ಜನತೆಗೆ ತಿಳಿಸುವ ಕೆಲಸ ಮಾಡಿ ಎಂದು ನಾವು ಸೂಚನೆ ನೀಡಿದ್ದೇವೆಯೇ ಹೊರತು, ಸರ್ಕಾರದವರು ಸ್ವಾತಂತ್ರ್ಯ ದಿನ ಆಚರಿಸಬಾರದು, ಕಾರ್ಯಕ್ರಮ ಮಾಡಬಾರದು ಎಂದು ಹೇಳುವಷ್ಟು ಮೂರ್ಖರು ನಾವಲ್ಲ ಎಂದು ಕೆಪಿಸಿಸಿ ಅಧ್ಯಕಷ ಡಿ.ಕೆ. ಶಿವಕುಮಾರ್ ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ದೇಶದ ಕಾರ್ಯಕ್ರಮ. ಪ್ರತಿಯೊಬ್ಬ ಭಾರತೀಯನೂ ಆಚರಿಸಬಹುದಾದ ಕಾರ್ಯಕ್ರಮ. ನಾವು ಕೇವಲ ರಾಷ್ಟ್ರಧ್ವಜವನ್ನು ಮಾರಾಟದ ಸರಕಾಗಿ ಮಾಡಬೇಡಿ ಎಂದಷ್ಟೇ ಆಕ್ಷೇಪ ವ್ಯಕ್ತಪಡಿಸಿದ್ದೆವು ಎಂದು ಸ್ಪಷ್ಟನೆ ನೀಡಿದರು.


ಕೇಂದ್ರ ಸಚಿವರು ಬಂದು ಹರ್ ಘರ್ ತಿರಂಗಾ ಕಾರ್ಯಕ್ರಮ ಮಾಡುತ್ತಿದ್ದು, ಕಾಂಗ್ರೆಸ್ ಕಾರ್ಯಕ್ರಮ ಹೈಜಾಕ್ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಅವರು ಕಾರ್ಯಕ್ರಮ ಮಾಡಲಿ. ಅವರಿಗೆ ತ್ರಿವರ್ಣ ಧ್ವಜಕ್ಕೆ ಗೌರವ ನೀಡುವ ಬುದ್ಧಿ ಬಂದಿರುವುದಕ್ಕೆ ನಾವು ಸಂತೋಷಪಡಬೇಕು. ನಾವು ಇಂತಹ ಚಿಲ್ಲರೆ ಚಿಂತನೆ ಮಾಡಬಾರದು. ನಮಗೆ ಮೊದಲು ರಾಷ್ಟ್ರ ಆದ್ಯತೆ ಆಗಿರಬೇಕು. ನಾವು ಇದನ್ನೇ ಆಗ್ರಹಿಸುತ್ತಿದ್ದೆವು. ಯಾರೋ ನಾಯಕನೊಬ್ಬ ರಾಷ್ಟ್ರಧ್ವಜ ತೆಗೆದು ಭಾಗವಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದ, ಅದರ ಬದಲು ಇಂತಹ ಕಾರ್ಯಕ್ರಮ ಮಾಡಲಿ. ದೇಶಪ್ರೇಮ ಬರಲಿ. ಆರ್ ಎಸ್ಎಸ್ ಕೂಡ ರಾಷ್ಟ್ರಧ್ವಜ ಹಾರಿಸಿದೆ ಎಂಬ ಸುದ್ದಿ ಕೇಳಿ ನನಗೆ ಸಂತೋಷವಾಯಿತು. ನಾನು ಅವರಿಗೆ ಅಭಿನಂದಿಸುತ್ತೇನೆ’ ಎಂದರು.


ಇಷ್ಟು ದಿನ ಆರ್ ಎಸ್ಎಸ್ ನವರು ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತಿರಲಿಲ್ಲವೇ ಎಂಬ ಪ್ರಶ್ನೆಗೆ, ‘ಅವರು ಎಲ್ಲಿ ಗೌರವ ನೀಡುತ್ತಿದ್ದರು. ವಾಜಪೇಯಿ ಅವರು ಪಟ್ಟು ಹಿಡಿದ ನಂತರವಷ್ಟೇ ಅವರು ತಮ್ಮ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮುಂದಾದರು. ನಿನ್ನೆ ಶಿಕ್ಷಣ ಸಚಿವ ನಾಗೇಶ್ ಅವರು ಎಬಿವಿಪಿ ಧ್ವಜವನ್ನು ಮೇಲಿಟ್ಟು ಅದರ ಕೆಳಗೆ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ’ ಎಂದು ತಿಳಿಸಿದರು.
ಕೇಂದ್ರದಿಂದ ಯಾವ ನಾಯಕರು ಬರುತ್ತಾರೆ ಎಂಬ ಪ್ರಶ್ನೆಗೆ, ‘ಪ್ರಿಯಾಂಕಾ ಗಾಂಧಿ ಅವರಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ವಿಚಾರ ಕೇಳಿ ಬಂದಿದೆ. ಸೋನಿಯಾ ಗಾಂಧಿ ಅವರು ನಮಗೆ ಈ ಕಾರ್ಯಕ್ರಮ ಮಾಡಲು ಕರೆ ನೀಡಿದ್ದು, ಇದು ನಮ್ಮೆಲ್ಲರ ಕಾರ್ಯಕ್ರಮ. ಕೇಂದ್ರದಿಂದ ಯಾರು ಬರುತ್ತಾರೆ ಎಂದು ಕಾದು ನೋಡೋಣ’ ಎಂದು ತಿಳಿಸಿದರು.

Join Whatsapp
Exit mobile version