ನವದೆಹಲಿ: ಸಂಸತ್ತಿನಲ್ಲಿ ಇಂದು ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂಬಂಧ ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ಲೋಕಸಭೆಯಲ್ಲಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ.
ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯ ಪರವಾಗಿ ಎನ್ ಡಿಎ ಒಗ್ಗಟ್ಟಾಗಿರುವುದು ಮಾತ್ರವಲ್ಲದೆ, ವಿರೋಧ ಪಕ್ಷವಾದ ಇಂಡಿಯಾ ಅಲೈಯನ್ಸ್ನ ಅನೇಕ ಸಂಸದರು ಸಹ ಇದನ್ನು ಬೆಂಬಲಿಸಿದ್ದಾರೆ ಮತ್ತು ಮಸೂದೆಯನ್ನು ಶೀಘ್ರದಲ್ಲೇ ಪರಿಚಯಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.
ವಕ್ಫ್ ಆಸ್ತಿಗಳನ್ನು ನಿರ್ವಹಿಸುವ 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಈ ತಿದ್ದುಪಡಿಗಳು ಭಾರತದಲ್ಲಿನ ವಕ್ಫ್ ಆಸ್ತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಆದರೆ, ಈ ಕಾನೂನನ್ನು ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧ ಪಕ್ಷಗಳು ವಿರೋಧಿಸಿವೆ. ಮಸೂದೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಜಂಟಿ ಸದನ ಸಮಿತಿಯು ವಿರೋಧ ಪಕ್ಷಗಳ ಸಲಹೆಗಳನ್ನು ಪರಿಗಣಿಸಿಲ್ಲ ಎಂದು ಅವು ಆರೋಪಿಸಿವೆ. ಸರಕಾರವು ತರಾತುರಿಯಲ್ಲಿ ಮಸೂದೆ ಮಂಡಿಸುತ್ತಿದೆ ಎಂದೂ ಅವು ಆರೋಪಿಸಿವೆ.
ಸಂಸದರ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಆಡಳಿತಾರೂಢ ಎನ್ ಡಿಎ ಮೇಲುಗೈ ಹೊಂದಿದೆ. ಬಿಜೆಪಿ 240 ಸಂಸದರನ್ನು ಹೊಂದಿದ್ದರೆ, ಅದರ ಮಿತ್ರಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯು ಕ್ರಮವಾಗಿ 16. ಮತ್ತು 12 ಮಂದಿ ಸಂಸದರನ್ನು ಹೊಂದಿವೆ. ಇನ್ನಿತರ ಮಿತ್ರಪಕ್ಷಗಳ ಸಂಸದರೂ ಸೇರಿ ಎನ್ ಡಿಎ ಮೈತ್ರಿಕೂಟದ ಬಳಿ 295 ಸಂಸದರ ಸಂಖ್ಯಾಬಲವಿದೆ. ಹೀಗಾಗಿ, ಬಹುಮತಕ್ಕೆ ಅಗತ್ಯವಿರುವ 272 ಮತಗಳನ್ನು ಸುಲಭವಾಗಿ ದಾಟಲಿದೆ. ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಅದರ ಇನ್ನಿತರ ಮಿತ್ರಪಕ್ಷಗಳು ಒಟ್ಟು 234 ಮತಗಳನ್ನು ಹೊಂದಿವೆ.
ಟಿಡಿಪಿ ಮತ್ತು ಜೆಡಿಯು ಈ ಮಸೂದೆಯನ್ನು ಬೆಂಬಲಿಸಿವೆ. ಟಿಡಿಪಿ ಸರ್ಕಾರದ ಮುಂದೆ ಕೆಲವು ಸಲಹೆಗಳನ್ನು ನೀಡಿತ್ತು, ಅದನ್ನು ಸೇರಿಸಲಾಗಿದೆ. ಅದೇ ಸಮಯದಲ್ಲಿ, ಜೆಡಿಯು ಸಂಸತ್ತಿನಲ್ಲಿ ಎಲ್ಲರ ಮುಂದೆ ತನ್ನ ಪರವಾಗಿ ಮಂಡಿಸುವುದಾಗಿ ಹೇಳಿದೆ. ಆದಾಗ್ಯೂ, ಜೆಡಿಯು ಸಲಹೆಗಳನ್ನು ಸಹ ಸ್ವೀಕರಿಸಲಾಗಿದೆ.
ವಿರೋಧ ಪಕ್ಷಗಳು ಮಸೂದೆಯನ್ನು ಬಲವಾಗಿ ವಿರೋಧಿಸಿವೆ. ಇದು ಅಸಂವಿಧಾನಿಕ ಮತ್ತು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಖಂಡಿಸಿವೆ. ಪ್ರಮುಖ ಮುಸ್ಲಿಂ ಸಂಘಟನೆಗಳು ಮಸೂದೆಯ ವಿರುದ್ಧ ಸಕ್ರಿಯವಾಗಿ ಬೆಂಬಲವನ್ನು ಕ್ರೋಢೀಕರಿಸುತ್ತಿವೆ.