Home ಕರಾವಳಿ ಮತ ಚಲಾಯಿಸಿ, ಸಂಭ್ರಮ ಪಡಿ: ಸಿಇಒ ಡಾ. ಕುಮಾರ್

ಮತ ಚಲಾಯಿಸಿ, ಸಂಭ್ರಮ ಪಡಿ: ಸಿಇಒ ಡಾ. ಕುಮಾರ್

ಮಂಗಳೂರು:- ಮಹಾನ್ ಚಿಂತಕರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆ ಇಂದಿನ ಅಗತ್ಯ, ಸಂವಿಧಾನ ಶಿಲ್ಪಿಗಳು ಭಾರತೀಯ ಪ್ರಜೆಗಳಿಗೆ ನೀಡಿರುವ ಮತದಾನದ ಹಕ್ಕನ್ನು ಅರ್ಹರೆಲ್ಲರೂ ಚಲಾವಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳೂ ಆಗಿರುವ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಅಭಿಪ್ರಾಯ ಪಟ್ಟರು.

ಅವರು ಏ.14ರ ಶುಕ್ರವಾರ ನಗರದ ಪಿವಿಎಸ್ ವೃತ್ತದ ಬಳಿ ಇರುವ ಮೌರಿಷ್ಠ ಅಪಾರ್ಟ್ಮೆಂಟ್ನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮತದಾನದ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿರುವ ಅಪಾರ್ಟ್ಮೆಂಟ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಜಾಪ್ರಭುತ್ವದ ಮೌಲ್ಯವನ್ನು ಸಾಕಾರಗೊಳಿಸಲು
ಚುನಾವಣೆಯಲ್ಲಿ ನಮ್ಮ ಹಕ್ಕು ಚಲಾಯಿಸಲೇಬೇಕು, ಪಾರದರ್ಶಕ ಚುನಾವಣೆಗೆ ಪ್ರತಿಯೊಬ್ಬರು ಮತಚಲಾಯಿಸುವುದು ಅತ್ಯಂತ ಮುಖ್ಯ. ನಗರದ ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ನಿರಾಸಕ್ತಿ ತೋರುತ್ತಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಮತದಾರನೇ ಪ್ರಭು, ಆತ ತನ್ನ ಹಕ್ಕು ಚಲಾವಣೆಗೆ ಹಿಂದೆಟು ಹಾಕಬಾರದು, ನಾನೇಕೆ ಸರದಿ ಸಾಲಿನಲ್ಲಿ ನಿಲ್ಲಬೇಕು ಎಂಬ ಧೋರಣೆಯು ಇರಬಹುದು, ಅದೇ ರೀತಿ ನನ್ನ ಒಂದು ವೋಟಿನಿಂದ ಏನು ಆಗದು ಎಂಬ ಮನೋಭಾವ ಅಥವಾ ಅತ್ಯಂತ ಉನ್ನತ ಮಟ್ಟದ ಜನ ನಾವು ಎನ್ನುವ ಧೋರಣೆಯ ಆಗಿರಬಹುದು ಅಥವಾ ದುಡಿಯುವ ವರ್ಗದವರು ಆ ಒಂದು ದಿನವನ್ನು ಬಳಸಿ ಹೊರಗೆ ಪ್ರವಾಸ ಹೋಗಲು ತಳೆದಿರುವ ಚಿಂತನೆಗಳೆಲ್ಲಾ ನಗರ ಪ್ರದೇಶದಲ್ಲಿ ಮತದಾನ ಕಡಿಮೆಯಾಗಲು ಕಾರಣಗಳಾಗಿವೆ ಎಂದು ಐಸೆಕ್ ಎಂಬ ಸಂಸ್ಥೆ ನೀಡಿರುವ ವರದಿಗಳಲ್ಲಿ ದಾಖಲಾಗಿವೆ, ಇದಕ್ಕೆ ಪರ್ಯಾಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ 80ಕ್ಕೂ ಹೆಚ್ಚು ಪ್ರತಿಶತ ಮತದಾನವಾಗಿದ್ದು ನಗರ ಪ್ರದೇಶದವರಿಗಿಂತ ತಮ್ಮ ಹಕ್ಕು ಚಲಾವಣೆಯಲ್ಲಿ ಅವರು ಜವಾಬ್ದಾರಿ ತೋರಿದ್ದಾರೆ ಎಂದು ಹೇಳಿದರು.

ಪ್ರತಿಯೊಂದು ಮತವು ಬೆಲೆಕಟ್ಟಲಾಗದ ಸಂಪತ್ತಾಗಿದೆ, ನಾವು ಇಲ್ಲಿ ಅಧಿಕಾರಿಗಳಾಗಿ ಬಂದಿಲ್ಲ ಭಾರತ ಚುನಾವಣಾ ಆಯೋಗದ ಪ್ರತಿನಿಧಿಗಳಾಗಿ ಮತದಾನ ದಿನವಾದ ಮೇ 10ರಂದು ಮನೆಯಿಂದ ಹೊರಬಂದು ತಮ್ಮ ಸಮೀಪದ ಮತಗಟ್ಟೆಯಲ್ಲಿ ಮತ ಚಲಾಯಿಸುವಂತೆ ತಮ್ಮನ್ನು ಕೇಳಲಾಗುತ್ತಿದೆ, ಇದಕ್ಕಾಗಿ ತಮಗೆ ಒಂದರಿಂದ – ಒಂದೂವರೆ ತಾಸು ಅವಧಿ ಬೇಕಾಗಬಹುದು, ಮತದಾನ ಸೇರಿದಂತೆ ಚುನಾವಣೆ ಪ್ರಕ್ರಿಯೆಗೆ ಆಡಳಿತ ಯಂತ್ರ ಕಳೆದ ಮೂರು ತಿಂಗಳಿಂದ ಸತತವಾಗಿ ಕಾರ್ಯನಿರತವಾಗಿದೆ, ನಕಾರಾತ್ಮಕ ಮನೋಭಾವ ತಳೆಯದಂತೆ, ಮುಕ್ತವಾಗಿ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾವಣೆಯ ಅನುಭವವನ್ನು ಪಡೆಯಬೇಕು, ನಮ್ಮ ನಮ್ಮ ಧರ್ಮಗಳಲ್ಲಿ ಆಚರಿಸಲಾಗುವ ಹಬ್ಬದಂತೆ ಚುನಾವಣೆಯಲ್ಲಿ ಮತ ಚಲಾಯಿಸಿ ಸಂಭ್ರಮ ಪಡಬೇಕು ಎಂದರು.

ಬರುವ ಮೇ. 10 ವಿಶೇಷವಾದ ದಿನ. ನಿಮ್ಮ ಹತ್ತಿರದ ಮತಗಟ್ಟೆಗೆ ಬನ್ನಿ. ಕ್ಯೂ ಇಲ್ಲದಿದ್ದರೆ 10 ನಿಮಿಷದಲ್ಲಿ ಮತ ಹಾಕಬಹುದು, ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬೇಡಿ ಮತ ಚಲಾವಣೆ ನಾಗರೀಕ ಹಾಗೂ ಮೂಲಭೂತ ಹಕ್ಕು, ನಾವು ನಮ್ಮ ಹಕ್ಕನ್ನು ಕೇಳುವಂತೆಯೇ ಕರ್ತವ್ಯವನ್ನು ತಪ್ಪದೇ ಮಾಡಬೇಕು, ಆ ನೈತಿಕ ಪ್ರಜ್ಞೆ ನಮ್ಮಲ್ಲಿರಬೇಕು ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಚೆನ್ನಬಸಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಗರ ಪ್ರದೇಶಗಳಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಮತದಾರರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವಂತೆ ಕರೆ ನೀಡಿದರು.

ಅಪಾಟ್೯ ಮೆಂಟ್ ಸಂಘದ ಆಧ್ಯಕ್ಷ ದಯಾನಂದ ಪೈ, ಕಾರ್ಯದರ್ಶಿ ಪ್ರಭು, ನೋಡಲ್ ಅಧಿಕಾರಿ ರಾಜಶೇಖರ್, ಇ ಎಲ್ ಸಿ ಅಧಿಕಾರಿ ಪುಷ್ಪಲತಾ, ಬಿಎಲ್ ಒ ಸೇರಿದಂತೆ, ಅಪಾಟ್೯ ಮೆಂಟ್ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯ ಮೂಲಕ ಅಪಾರ್ಟ್ಮೆಂಟ್ನ ನಿವಾಸಿಗಳಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಸಿಗ್ನೇಚರ್ ಕ್ಯಾಂಪೇನ್ ಗೆ ಚಾಲನೆ ನೀಡಿ ಮತದಾನದ ಮಹತ್ವದ ಬಗ್ಗೆ ತಿಳಿಸಲಾಯಿತು.
ಇದೇ ಮೊದಲ ಬಾರಿಗೆ ವೋಟರ್ ಆಗಿರುವ ಅನುಷಾ ಪ್ರಭು ಸಹಿ ಮಾಡಿದ್ದು ವಿಶೇಷವಾಗಿತ್ತು.

ಅದರೊಂದಿಗೆ ಜಾನ್ ಚಂದ್ರನ್ ಅವರ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

Join Whatsapp
Exit mobile version