ಬೆಂಗಳೂರು: ನೊಂದ ಮಹಿಳೆಯರ ಧ್ವನಿಯಾಗಿ ರಾಜ್ಯವ್ಯಾಪಿ ಕಾರ್ಯನಿರ್ವಹಿಸುತ್ತಿದ್ದ 72 ಸಾಂತ್ವನ ಕೇಂದ್ರಗಳನ್ನು ಮುಂದುವರೆಸುವ ಮೂಲಕ ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡಬೇಕೆಂದು ಮಹಿಳಾ ಹೋರಾಟಗಾರ್ತಿಯರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಮಾಜಿ ಶಾಸಕಿ ಹಾಗೂ ದರ್ಶನ್ ಮಹಿಳಾ ಮತ್ತು ಮಕ್ಕಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕಿ ಸೀಮಾ ಅಶೋಕ ಮಸೂತಿ, ಸಾಧನಾ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಸಂಸ್ಥಾಪಕಿ, ರಾಜ್ಯ ಮಾನವ ಹಕ್ಕು ಆಯೋಗದ ನಾಮನಿರ್ದೇಶನ ಸದಸ್ಯರಾದ ಡಾ.ಇಸಬೆಲ್ಲಾ ಜೇವಿಯರ್ ಅವರು ಸಾಂತ್ವನ ಕೇಂದ್ರಗಳ ಪ್ರಸ್ತುತತೆ ಮತ್ತು ಅಗತ್ಯತೆ ಕುರಿತು ವಿವರವಾಗಿ ಮನವಿ ಸಲ್ಲಿಸಿದರು.
ಕಳೆದ 20 ವರ್ಷಗಳಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಹಿಳಾ ದೌರ್ಜನ್ಯ ಪ್ರಕರಣಗಳು ಈ ಕೇಂದ್ರಗಳಿಗೆ ದಾಖಲಾಗುವುದು ಹೆಚ್ಚಾದ ನಂತರ 2008-09ನೇ ಸಾಲಿನಿಂದ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಯಿತು. ಕೋವಿಡ್ ನಂತರದ ಆರ್ಥಿಕ ಸಂಕಷ್ಟ ಹಾಗೂ ಸಖಿ ಕೇಂದ್ರಗಳು ಕೆಲವು ಕಡೆ ಇರುವ ಕಾರಣ 194 ಕೇಂದ್ರಗಳ ಪೈಕಿ 72 ಕೇಂದ್ರಗಳನ್ನು ಏಪ್ರಿಲ್ನಿಂದ ಸ್ಥಗಿತಗೊಳಿಸಲಾಗಿದೆ. ಆದರೆ ಈ ಕೇಂದ್ರಗಳು ಸ್ಥಗಿತಗೊಂಡರೆ ನೊಂದ ಮಹಿಳೆಯರು ಸುಲಭವಾಗಿ ಸಂಪರ್ಕಿಸಬಹುದಾದ ಒಂದು ಯೋಜನೆಯೇ ಕೊನೆಗೊಂಡಂತಾಗುತ್ತದೆ. ರಾಜ್ಯ ಸರ್ಕಾರಕ್ಕೂ ಉತ್ತಮ ಹೆಸರನ್ನು ತಂದುಕೊಡುತ್ತಿದ್ದು, ಸಾವಿರಾರು ಮಹಿಳೆಯರು ಅನುಕೂಲ ಪಡೆದುಕೊಂಡಿದ್ದಾರೆ. ಆದಕಾರಣ ಈ ಕೇಂದ್ರಗಳನ್ನು ರದ್ದುಗೊಳಿಸದೆ ಮುಂದುವರೆಸಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಸೀಮಾ ಅಶೋಕ ಮಸೂತಿ ಹಾಗೂ ಡಾ.ಇಸಬೆಲ್ಲಾ ಜೇವಿಯರ್ ಅವರ ತಂಡವು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಸರ್ಕಾರದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಗೌರವ ಧನದ ಆಧಾರದಲ್ಲಿ ಕೇಂದ್ರದ ಸಿಬ್ಬಂದಿಗಳು ಸಾಮಾಜಿಕ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಕ್ಕೇನೂ ಹೆಚ್ಚಿಗೆ ಹೊರೆಯಾಗುವುದಿಲ್ಲ. ಆದಕಾರಣ ಈ ಕೇಂದ್ರಗಳನ್ನು ಮುಂದುವರೆಸುವಂತೆ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.