Home ಟಾಪ್ ಸುದ್ದಿಗಳು ಶಿಕ್ಷಣ ನೀತಿಯಡಿ ಇದೇ 23ರಿಂದ ಪ್ರವೇಶ ಪ್ರಕ್ರಿಯೆ ಆರಂಭ: ಡಾ.ಸಿ.ಎನ್. ಅಶ್ವತ್ಥನಾರಾಯಣ

ಶಿಕ್ಷಣ ನೀತಿಯಡಿ ಇದೇ 23ರಿಂದ ಪ್ರವೇಶ ಪ್ರಕ್ರಿಯೆ ಆರಂಭ: ಡಾ.ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು; ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ಮತ್ತು ಬದಲಾವಣೆ ತರುವ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯದಲ್ಲಿ ಈ ತಿಂಗಳ 23ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.


ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಕ್ರಿಸ್ತು ಜಯಂತಿ ಕಾಲೇಜಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ -2020ರ ನೀಲನಕ್ಷೆ ಹಾಗೂ ಅನುಷ್ಠಾನ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಅಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎಂದರು.


ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡದೆ ಅಥವಾ ಅದನ್ನು ಸರಿಯಾಗಿ ಗ್ರಹಿಸದೆ ಟೀಕೆ ಮಾಡುವುದು ಸರಿಯಲ್ಲ. ಶಿಕ್ಷಣ ನೀತಿ ವಿರೋಧಿಸುವುದು ಅಭಿವೃದ್ಧಿಯನ್ನು ವಿರೋಧಿಸಿದಂತೆ. ವಿಶಾಲ ತಳಹದಿ ಹಾಗೂ ವಿಸ್ತೃತ ದೃಷ್ಟಿಕೋನದಿಂದ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದರು. ಆಯ್ಕೆಯ ಕಲಿಕೆಗೆ ವಿಪುಲ ಅವಕಾಶಗಳಿವೆ. ಇಷ್ಟು ದಿನ ಶಿಕ್ಷಕರು ಬೋಧಿಸಿದ್ದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಇನ್ನು ಮುಂದೆ ತಮಗೆ ಸೂಕ್ತವಾದ ವಿಷಯಗಳನ್ನು ಕಲಿಯಲಿದ್ದಾರೆ. ದೇಶದ ಯಾವುದೇ ಸಮಸ್ಯೆಗಳಿಗೂ ಶಿಕ್ಷಣ ಪರಿಹಾರವಾಗಿದೆ ಎಂದು ಸಚಿವರು ತಿಳಿಸಿದರು.


ಕ್ರಿಸ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಗಸ್ಟಿನ್ ಜಾರ್ಜ್, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆಗೆ ಮತ್ತು ಭೋಧನೆಗೆ ಸಮಾನ ಒತ್ತು ನೀಡಲಾಗಿದ್ದು, ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಲಿದೆ ಎಂದು ತಿಳಿಸಿದರು.

Join Whatsapp
Exit mobile version