ಕೊಚ್ಚಿ: ಕೇರಳದ ವಿಝಿಂಜಂ ಪ್ರಾಜೆಕ್ಟ್ ಪ್ರದೇಶದಲ್ಲಿ ನಡೆಯುತ್ತಿರುವ ಗಲಭೆಗಳು ಹಲವರಿಗೆ ಹಲವು ಅಭಿಪ್ರಾಯಗಳನ್ನು ಉಂಟುಮಾಡಿರುವಂತೆ ಕಾಣುತ್ತಿದೆ. ಎಲ್ ಡಿ ಎಫ್ ಸರಕಾರದ ವಿರುದ್ಧ ಕತ್ತಿ ಮಸೆಯುತ್ತಿರುವವರು ಎಂದಿನಂತೆ ಸರಕಾರ ಪ್ರತಿಭಟನಕಾರರ ವಿರುದ್ಧ ದಮನ ನಡೆಸುತ್ತಿದೆ ಎಂದರೆ, ಎಲ್’ಡಿಎಫ್ ಸರಕಾರದ ಬಗ್ಗೆ ಸಹಾನುಭೂತಿ ಇರುವವರು ಕೂಡ ಸಿಪಿಐ(ಎಂ) ಕೂಡ ಅದಾನಿ ಪ್ರಾಜೆಕ್ಟಿನ ಪರವಾಗಿ ನಿಂತಿದೆ ಎಂದು ಭಾವಿಸಿ ಅದನ್ನು ಟೀಕಿಸುತ್ತಿದ್ದಾರೆ. ಇದನ್ನು ಸ್ಥಳೀಯ ಚರ್ಚ್ ಮೀನುಗಾರರ ಹಿತದೃಷ್ಟಿಯಿಂದ ವಿರೋಧಿಸುತ್ತಿದೆ, ಆದರೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ) ಕೂಡ ಸೇರಿದಂತೆ ರಾಜಕೀಯ ಪಕ್ಷಗಳು ಅವರ ವಿರುದ್ಧ ಕೆಲಸ ಮಾಡುತ್ತಿವೆ ಎಂಬ ಭಾವನೆಯೂ ಉಂಟಾಗಿದೆ.
ಈ ಯೋಜನೆಯಿಂದ ಸಮುದ್ರ ಕೊರೆತ ಆಗುವುದಿಲ್ಲ ಎಂದು ತಜ್ಞರ ಅಧ್ಯಯನ ಸಮಿತಿ ಹೇಳಿದೆ. ಆದ್ದರಿಂದ ಈ ಪ್ರಾಜೆಕ್ಟನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಸರಕಾರ ಪ್ರತಿಭಟನಕಾರರ ಏಳು ಬೇಡಿಕೆಗಳ ಪೈಕಿ 6 ಅನ್ನು ಒಪ್ಪಿಕೊಂಡಿದೆ. 7 ನೇಯದ್ದು ಈ ಪ್ರಾಜೆಕ್ಟನ್ನು ನಿಲ್ಲಿಸಬೇಕು ಎಂಬುದು. ಇದನ್ನು ಒಪ್ಪಲು ಸಾಧ್ಯವಿಲ್ಲ, ಏಕೆಂದರೆ ಹೀಗೆ ಮಾಡಿದರೆ, ಅಭಿವೃದ್ಧಿ ಕಾರ್ಯಗಳಲ್ಲಿ ಹೂಡಿಕೆಗೆ ಧಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಪ್ರಾಜೆಕ್ಟನ್ನು ಕೇರಳದ ಎಲ್ಲ ರಾಜಕೀಯ ಪಕ್ಷಗಳು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬೆಂಬಲಿಸಿದ್ದವು. ಈಗ ಇದನ್ನು ವಿರೋಧಿಸುತ್ತಿರುವ ಲ್ಯಾಟಿನ್ ಕ್ಯಾಥೊಲಿಕ್ ಚರ್ಚ್ ಕೂಡ ಇದನ್ನು ಆರಂಭದಲ್ಲಿ ಬೆಂಬಲಿಸಿತ್ತು. ಆಗಿನ ಆರ್ಚ್ ಬಿಷಪ್ ಸ್ಥಳೀಯ ಮೀನುಗಾರರಿಗೆ ಇದರಿಂದ ಆಗುವ ಪ್ರಯೋಜನಗಳನ್ನು ಸಂದರ್ಶನವೊಂದರಲ್ಲಿ ಶ್ಲಾಘಿಸಿದ್ದರು ಕೂಡ ಎಂದು ಹೇಳಲಾಗಿದೆ.
ಈ ಪ್ರಾಜೆಕ್ಟನ್ನು ಆರಂಭಿಸಿದ್ದು ಹಿಂದಿನ ಯುಡಿಎಫ್ ಸರಕಾರದ ಅವಧಿಯಲ್ಲಿ ಎಂಬುದೂ ಗಮನಾರ್ಹ. ಆಗ ಇದನ್ನು ಪಿಪಿಪಿ(ಸಾರ್ವಜನಿಕ -ಖಾಸಗಿ ಭಾಗೀದಾರಿಕೆ) ವಿಧಾನಕ್ಕೆ ಬದಲಿಸಿ ಅದಾನಿ ಗುಂಪಿಗೆ ಕೊಡುವುದನ್ನು ವಿರೋಧಿಸಿದ್ದು ಸಿಪಿಐ(ಎಂ) ನೇತೃತ್ವದ ಎಲ್ ಡಿ ಎಫ್. ಆದರೆ ಈ ಪ್ರಾಜೆಕ್ಟ್ ಈಗ ಬಹಳಷ್ಟು ಮುಂದುವರಿದ ಹಂತದಲ್ಲಿ ಇರುವುದರಿಂದ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದ್ದರಿಂದ ಅದೊಂದು ಬೇಡಿಕೆಯನ್ನು ಬಿಟ್ಟು ಈ ಪ್ರಾಜೆಕ್ಟನ್ನು ವಿರೋಧಿಸುವವರ ಉಳಿದ ಎಲ್ಲ ಬೇಡಿಕೆಗಳನ್ನು ಎಲ್ ಡಿ ಎಫ್ ಸರಕಾರ ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಈ ಪ್ರಾಜೆಕ್ಟನ್ನು ವಿರೋಧಿಸುವ ಪಾದ್ರಿಗಳು ಮತ್ತು ಇತರ ಪ್ರತಿಭಟನಕಾರರು ನಿರ್ಮಾಣ ಸ್ಥಳಕ್ಕೆ ಬರುವ ಟ್ರಕ್ಕುಗಳನ್ನು ತಡೆಯವುದಿಲ್ಲ, ಸಿಬ್ಬಂದಿಯ ಮೇಲೆ ದಾಳಿ ಮಾಡುವುದಿಲ್ಲ ಎಂದು ಹೈಕೋರ್ಟಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಆದರೂ ನಿರ್ಮಾಣ ಕಾರ್ಯ ಪುನಾರಂಭಗೊಂಡಾಗ ಟ್ರಕ್ಕುಗಳನ್ನು ತಡೆದಿರುವುದು ಮತ್ತು ಸಿಬ್ಬಂದಿಯ ಮೇಲೆ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ಸಹಜವಾಗಿಯೇ ಇದರ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಯನ್ನು ಎತ್ತಿದೆ. ಇದು ಚುನಾಯಿತ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಇತ್ತೀಚೆಗೆ ಹೆಚ್ಚುತ್ತಿರುವ ಪಿತೂರಿಗಳ ಭಾಗವಾಗಿರುವಂತೆ ಕಾಣುತ್ತದೆ ಎಂದು ಸರಕಾರದ ಮತ್ತು ಎಲ್ ಡಿ ಎಫ್ ನ ವಕ್ತಾರರು ಹೇಳುತ್ತಿದ್ದಾರೆ.