Home ಟಾಪ್ ಸುದ್ದಿಗಳು ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರತಿಪಕ್ಷದ ನಾಯಕನಾಗಿ ಮುಂದುವರಿಕೆ

ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರತಿಪಕ್ಷದ ನಾಯಕನಾಗಿ ಮುಂದುವರಿಕೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಒಬ್ಬರಿಗೆ ಒಂದು ಹುದ್ದೆ ಮತ್ತು ಎಐಸಿಸಿ ಅಧ್ಯಕ್ಷ ಚುನಾವಣೆ ಕಾಲದಲ್ಲಿ ಅಶೋಕ್ ಗೆಹ್ಲೋಟ್’ಗೆ ಹೇಳಿದ ಒಬ್ಬರಿಗೆ ಒಂದು ಹುದ್ದೆ ಎಂಬ ಕಾಂಗ್ರೆಸ್ ನಿಯಮ ಮತ್ತೆ ಚರ್ಚೆಗೆಡೆಯಾಗಿದೆ.

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.

ಅಶೋಕ್ ಗೆಹ್ಲೋಟ್ ನಾನು ದ್ವಿಪಾತ್ರಕ್ಕೆ ಸಿದ್ಧ ಎಂದು ಹೇಳಿದ್ದರು. ಅವರಿಗೆ ನೋ ಎಂದಿದ್ದ ಹೈಕಮಾಂಡ್ ರಾಜ್ಯ ಸಭೆಯಲ್ಲಿ ಖರ್ಗೆಯವರನ್ನು ಪ್ರತಿ ಪಕ್ಷದ ನಾಯಕರಾಗಿ ಉಳಿಸಿಕೊಂಡಿದೆ.

ಸೋನಿಯಾ ಗಾಂಧಿಯವರು ಇಂದು ಖರ್ಗೆ, ಜೈರಾಂ ರಮೇಶ್, ಕೆ. ಸಿ. ವೇಣುಗೋಪಾಲ್ ಈ ಮೂವರೊಡನೆ ಮಾತ್ರ ಈ ಬಗ್ಗೆ ಚರ್ಚೆ ನಡೆಸಿದರು. ಸದ್ಯಕ್ಕೆ ಮುಂದುವರಿಯಲಿ, ಬೇಗನೆ ಬದಲಾಯಿಸಲಾಗುವುದು ಎಂದು ಮಾತುಕತೆ ಆಯಿತು ಎಂದು ತಿಳಿದು ಬಂದಿದೆ.

ದಿಗ್ವಿಜಯ ಸಿಂಗ್ ಮತ್ತು ಪಿ. ಚಿದಂಬರಂ ರಾಜ್ಯ ಸಭೆಯಲ್ಲಿ ಪ್ರತಿ ಪಕ್ಷದ ಸ್ಥಾನಕ್ಕಾಗಿ ಕಾದಿದ್ದಾರೆ. ಡಿಸೆಂಬರ್ 8ರ ಚುನಾವಣಾ ಫಲಿತಾಂಶದ ಬಳಿಕ ಅದು ತೀರ್ಮಾನವಾಗಬಹುದು.

ಎಐಸಿಸಿ ಅಧ್ಯಕ್ಷತೆಗೆ ಸ್ಪರ್ಧಿಸುವಾಗ ಖರ್ಗೆಯವರು ರಾಜ್ಯಸಭಾ ಪ್ರತಿ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದನ್ನು ಇನ್ನೂ ಅಂಗೀಕರಿಸಿಲ್ಲ. ಕಾಂಗ್ರೆಸ್ಸಿನ ಹಲವರ ಪ್ರಕಾರ ಚಳಿಗಾಲದ ಅಧಿವೇಶನ ಮುಗಿಯುವವರೆಗಾದರೂ ಖರ್ಗೆಯವರು ಎರಡೂ ಸ್ಥಾನಗಳಲ್ಲಿ ಮುಂದುವರಿಯುತ್ತಾರೆ.

ಅಧೀರ್ ರಂಜನ್ ಚೌಧರಿಯವರದೂ ಇದೇ ದ್ವಿಪಾತ್ರದ ಸಮಸ್ಯೆ. ಅವರು ಲೋಕ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವುದರ ಜೊತೆಗೆ ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಮುಂದುವರಿದಿದ್ದಾರೆ. ಜೈರಾಂ ರಮೇಶ್ ಅವರು ಕಾಂಗ್ರೆಸ್ಸಿನ ರಾಜ್ಯ ಸಭಾ ಮುಖ್ಯ ಸಚೇತಕ ಆಗಿರುವುದರ ಜೊತೆಗೆ ಕಾಂಗ್ರೆಸ್ ಸಂಪರ್ಕ ಸಂವಹನ ಮುಖ್ಯಸ್ಥರಾಗಿಯೂ ಇದ್ದಾರೆ.

ಇದೇ ವರುಷದಲ್ಲಿ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಒಬ್ಬರಿಗೆ ಒಂದೇ ಹುದ್ದೆ ನಿಯಮವನ್ನು ಕಾಂಗ್ರೆಸ್ ಕಟ್ಟುನಿಟ್ಟಾಗಿ ಪಾಲಿಸುವುದು ಎಂದಿದ್ದರು.

Join Whatsapp
Exit mobile version