►ಮನೋಬಲವಿದ್ದರೆ ಸಂಕಷ್ಟದಿಂದ ಮುಕ್ತರಾಗಬಹುದು – ನಟಿ ಮಾಲಾಶ್ರೀ
ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಕ್ಯಾನ್ಸರ್ ವೈದ್ಯರ ತಂಡ ನಗರದಲ್ಲಿಂದು ಜನ ಜಾಗೃತಿ ಜಾಥ ಆಯೋಜಿಸಿತ್ತು.
ಡಬಲ್ ರಸ್ತೆಯ ಇನ್ಸ್’ಟಿಟ್ಯೂಟ್ ಆಫ್ ಆಂಕೊಲಾಜಿಯಿಂದ ಲಾಲ್ ಭಾಗ್ ಮತ್ತಿತರ ಪ್ರದೇಶಗಳಲ್ಲಿ ವೈದ್ಯರು, ಕ್ಯಾನ್ಸರ್ ರೋಗಿಗಳು, ರೋಗದಿಂದ ಗುಣಮುಖರಾದವರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಜಾಥದಲ್ಲಿ ಪಾಲ್ಗೊಂಡು ಕ್ಯಾನ್ಸರ್ ರೋಗಿಗಳಲ್ಲಿ ಅರಿವು ಮೂಡಿಸಿದರು. ಕ್ಯಾನ್ಸರ್ ರೋಗಿಗಳು ವಿಶ್ವಾಸದ ಹೆಜ್ಜೆ ಹಾಕಿದರು.
ಜಾಥದಲ್ಲಿ ಎಚ್.ಸಿ.ಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜಯ್ ಕುಮಾರ್, ಬೆಂಗಳೂರು ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ. ಎಂಎ ಸಲೀಂ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಮತ್ತು ಚಿತ್ರನಟಿ ಮಾಲಾಶ್ರೀ ಮತ್ತಿತರರು ಜಾಥದಲ್ಲಿ ಭಾಗವಹಿಸಿದ್ದರು. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು.
ಬೆಂಗಳೂರು – ಐಎಂಎ ಅಧ್ಯಕ್ಷ ಡಾ.ವೆಂಕಟಾಚಲ, ಗೌರವ ಕಾರ್ಯದರ್ಶಿ ಡಾ. ಪ್ರೇಮ್ತಾ ಆರ್. ಖಜಾಂಚಿ ಡಾ. ಕೆ. ಮಹೇಶ್, ಹಿರಿಯ ಕ್ಯಾನ್ಸರ್ ತಜ್ಞ ಡಾ. ಗೋಪಿನಾಥ್ ಮತ್ತಿತರು ಭಾಗವಹಿಸಿದ್ದರು.
ಮಾಲಾಶ್ರೀ ಮಾತನಾಡಿ, ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಲು ಮಾನಸಿಕವಾಗಿ ಸಿದ್ಧವಾಗಬೇಕು. ಮನೋಬಲದಿಂದ ಎಂತಹ ಸಂಕಷ್ಟದಿಂದ ಬೇಕಾದರೂ ಹೊರ ಬರಬಹುದು ಎಂದರು.