Home ಕರಾವಳಿ ವಿಶಾಲ ಗಾಣಿಗ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್ ಕೊನೆಗೂ ಪೊಲೀಸ್ ಬಲೆಗೆ

ವಿಶಾಲ ಗಾಣಿಗ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್ ಕೊನೆಗೂ ಪೊಲೀಸ್ ಬಲೆಗೆ

ಉಡುಪಿ: ಕಳೆದ ವರ್ಷ ಬ್ರಹ್ಮಾವರದ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿನ್ನು ಮಹಾರಾಷ್ಟ್ರದ ಗಾಂಧೇವಿ ನಿವಾಸಿ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೇ ಸೋನು (21) ಎಂದು ಗುರುತಿಸಲಾಗಿದೆ.

2021 ಜುಲೈ 12 ರಂದು ಬ್ರಹ್ಮಾವರ ತಾಲೂಕು ಕುಮ್ರಗೊಡು ಗ್ರಾಮದ ಮಿಲನ್ ರೆಸಿಡೆನ್ಸಿಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆ ವಿಶಾಲ ಗಾಣಿಗ ಅವರನ್ನು ಭೀಕರವಾಗಿ ಕೊಲೆ ಮಾಡಿ ಚಿನ್ನಾಭರಣವನ್ನು ದೋಚಲಾಗಿತ್ತು. ಆರಂಭದಲ್ಲಿ ಇದು ಹಣಕ್ಕಾಗಿ ನಡೆದ ಕೊಲೆ ಎಂದು ಭಾವಿಸಲಾಗಿತ್ತು. ಆದರೆ ಪ್ರಕರಣದ ವಿಚಾರಣೆ ತೀವ್ರಗೊಳಿಸಿದಾಗ ಆಕೆಯ ಪತಿಯೇ ಕೊಲೆಗಾರ ಎಂಬುದು ಪತ್ತೆಯಾಗಿತ್ತು.

ಮೃತ ವಿಶಾಲ ಗಾಣಿಗ ಅವರನ್ನು ಅವರ ಪತಿ ರಾಮಕೃಷ್ಣ ಗಾಣಿಗ ವಿದೇಶದಲ್ಲಿದ್ದುಕೊಂಡು ಕೊಲೆಗೆ ಸುಪಾರಿ ನೀಡಿದ್ದ ಎಂಬುದು ಬೆಳಕಿಗೆ ಬಂದಿತ್ತು.

ಈ ಪ್ರಕರಣದ ತನಿಖಾಧಿಕಾರಿಯಾದ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರ ನೇತೃತ್ವದಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಹಾದಿಮನಿ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್ ರವರನ್ನು ಒಳಗೊಂಡ ವಿಶೇಷ ತಂಡವು ಸುಫಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಈತನನ್ನು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮೃತ ವಿಶಾಲ ಗಾಣಿಗಳ ಗಂಡ ರಾಮಕೃಷ್ಣ ಗಾಣಿಗ ಹಾಗೂ ಉತ್ತರ ಪ್ರದೇಶದ ಗೋರಕ್ ಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಈಗಾಗಲೇ ಬಂಧಿಸಿದ್ದು ಸುಲಿಗೆ ಮಾಡಿದ ಮೃತಳ ಚಿನ್ನಾಭರಣವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಬಂಧಿತರಾದ ಆರೋಪಿಗಳಿಬ್ಬರು ಕಳೆದ ಒಂದು ವರ್ಷದಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಇವರ ವಿರುದ್ದ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಸುಪಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಈತನು ಕಾಣೆಯಾದ ಬಗ್ಗೆ ಈತನ ಪೋಷಕರು ಈ ಬಗ್ಗೆ ಮುಂಬೈಯ ಗಾಮ್ ದೇವಿ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣವನ್ನು ದಾಖಲು ಮಾಡಿದ್ದರು.

Join Whatsapp
Exit mobile version