ಬೆಂಗಳೂರು: ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಮಂಡ್ಯ ನಗರದ ಪೂರ್ವ ಠಾಣೆಯಲ್ಲಿ A 1 ಆರೋಪಿಯಾಗಿ ಸಚಿವ ಡಾ.ಅಶ್ವತ್ಥ್ ನಾರಾಯಣ, A2 ಆರೋಪಿಯಾಗಿ ಬಿ.ಜೆ.ಪಿ ಅಭ್ಯರ್ಥಿ ರವಿಶಂಕರ್ ಮೇಲೆ FIR ದಾಖಲಾಗಿದೆ.
ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬರುವ ಮಂಡ್ಯ ನಗರದ ಹಲವು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಮತ್ತು ಬಿ.ಜೆ.ಪಿ ಮುಖಂಡರ ಜೊತೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರು ಮೇ 16ರಂದು ಚುನಾವಣಾ ಪ್ರಚಾರ ಮಾಡುವುದರ ಮುಖಾಂತರ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯು ದೂರು ನೀಡಿತ್ತು.
ದೂರಿನ ಮೇರೆಗೆ ಅಧಿಕಾರಿಗಳು ತನಿಖೆ ನಡೆಸಿ ನೀತಿಸಂಹಿತೆ ಉಲ್ಲಂಘನೆ ಮಾಡಿರುವುದು ಸಾಬೀತಾಗಿದೆ ಎಂದು ಚುನಾವಣಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಆದರೂ FIR ಮಾಡಲು ಮೀನಾಮೇಷ ಎಣಿಸುತ್ತಿದ್ದ ಅಧಿಕಾರಿಗಳಿಗೆ ಕಾಂಗ್ರೆಸ್ ಪಕ್ಷವು ಪತ್ರಿಕಾಗೋಷ್ಠಿಯ ಮುಖಾಂತರ ದಾಖಲೆಗಳನ್ನು ಬಿಡುಗಡೆ ಮಾಡಿ ಒತ್ತಾಯ ಮಾಡಿದ ನಂತರ ಮಂಡ್ಯ ನಗರದ ಪೂರ್ವ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
A1 ಸಚಿವ ಡಾ॥ ಅಶ್ವತ್ಥ್ ನಾರಾಯಣ, A2 ಬಿ.ಜೆ.ಪಿ ಅಭ್ಯರ್ಥಿ ರವಿಶಂಕರ್ ಮೇಲೆ FIR ದಾಖಲಾಗಿರುತ್ತದೆ ಆದ್ದರಿಂದ ಈ ಪ್ರಕರಣದಲ್ಲಿ A1 ಆರೋಪಿ ಆಗಿರುವ ಸಚಿವ ಡಾ. ಅಶ್ವತ್ಥ್ ನಾರಾಯಣ ರವರನ್ನು ಪದವೀಧರ ಕ್ಷೇತ್ರದ ಚುನಾವಣೆ ಪ್ರಕ್ರಿಯೆಯಿಂದ ದೂರವಿಡಬೇಕು ಎಂದು ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ಒತ್ತಾಯಿಸಿದೆ.