Home ಅಂಕಣಗಳು ಸಾಂಸ್ಥಿಕ ಹತ್ಯೆ; ಕರಾಳ ಕಾನೂನಿನ ಬಲಿಪಶುಗಳು

ಸಾಂಸ್ಥಿಕ ಹತ್ಯೆ; ಕರಾಳ ಕಾನೂನಿನ ಬಲಿಪಶುಗಳು

ತನ್ನನ್ನು ತಾನು ಉಳಿಸಿಕೊಳ್ಳಲು ಕಂಸ ಸ್ವತಃ ಸಹೋದರಿ ದೇವಕಿ, ಭಾವ ವಾಸುದೇವನನ್ನು ಜೈಲಿನಲ್ಲಿಟ್ಟು ಅವರ ಮಕ್ಕಳನ್ನು ಕತ್ತರಿಸಿ ಹಾಕಿದಂತೆ, ಸೈದ್ಧಾಂತಿಕ ವಿರೋಧಿಗಳನ್ನು ನಿರ್ನಾಮ ಮಾಡುವ ಕ್ರಿಯೆ ಭಾರತದಲ್ಲಿ ಆರಂಭವಾಗಿದೆ. ಈಗಾಗಲೇ ಬಹಳಷ್ಟು ಬಲಿಗಳಾಗಿವೆ. ಅದಕ್ಕೆ ಮತ್ತೊಂದು ಸೇರ್ಪಡೆ 83 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ. ಸ್ಟ್ಯಾನ್ ರ ವಿರುದ್ಧ ಯುಎಪಿಎ ಎಂಬ ಕಠಿಣ ಕಾಯ್ದೆ ಬಳಸಿದ ಸರ್ಕಾರ ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿತು.

ಅವರ ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳನ್ನು ಕಂಡು ಕಾಣದಂತೆ ಮುಖ ತಿರುಗಿಸಿದ ಪ್ರಭುತ್ವ ಕೊನೆಗೆ ಹಿರಿಯ ಜೀವವೊಂದು ವಿಚಾರಣಾಧೀನ ಖೈದಿಯಾಗಿಯೇ ನರಳುತ್ತಾ ಜೀವ ಬಿಡುವಂತೆ ಮಾಡಿದೆ. ಅವರ ಸಾವನ್ನು ವಿಕೃತ ಮನಸ್ಸುಗಳು ಸಂಭ್ರಮಿಸಿವೆ. ಅವರ ಸಾವಿನಿಂದ ಪ್ರಜ್ಞಾವಂತ ಸಮಾಜ ಕನಲಿ ಹೋಗಿದೆ. ಪಾರ್ಕಿನ್ಸನ್ ಸೇರಿದಂತೆ ಅನೇಕ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯ ಜೀವಕ್ಕೆ ನಡುಗುವ ಕೈನಲ್ಲಿ ನೀರು ಕುಡಿಯಲಾಗಲ್ಲ ಒಂದು ಸ್ಟ್ರಾ ಕೊಡಿ ಎಂದು ಅಂಗಲಾಚಿದರೆ, ಅದಕ್ಕಾಗಿ ತಿಂಗಳು ಗಟ್ಟಲೆ ಹೆಣಗಾಡಿಸಿದ ಪ್ರಭುತ್ವದ ವಿಕೃತಿಯನ್ನು ಸಮಾಜ ಎಂದಿಗೂ ಮರೆಯುವುದಿಲ್ಲ. ಜನ ಎಲ್ಲವನ್ನು ಸಹಿಸಿಕೊಳ್ಳುತ್ತಾರೆ ಎಂಬ ಭ್ರಮೆಯಿಂದ ಪ್ರಭುತ್ವ ಮೊದಲು ಹೊರ ಬರಬೇಕಿದೆ.

ಪುರಾಣದಲ್ಲೇ ಉಲ್ಲೇಖಿಸಿದಂತೆ ಕಂಸನ ತಪ್ಪುಗಳು ಅಸಹನೀಯವಾದಾಗ ಅಂತ್ಯವಾಗಲೇಬೇಕಾಯಿತು. ಸರ್ವಾಧಿಕಾರ, ನಿರಂಕುಶತ್ವ ಮಿತಿ ಮೀರಿದಾಗ ವಿಶ್ವದ ಬಹಳಷ್ಟು ದೇಶಗಳಲ್ಲಿ ರಕ್ತ ಕ್ರಾಂತಿಯೇ ನಡೆದು ಹೋಗಿದೆ. ನಮ್ಮಲ್ಲಿನ್ನು ಜನ ಕಾಡ್ಗಿಚ್ಚನ್ನು ಹೊಟ್ಟೆಯಲ್ಲಿಟ್ಟುಕೊಂಡು ಸಹಿಷ್ಣುಗಳಾಗಿದ್ದಾರೆ ಎಂದರೆ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಹಾಕಿಕೊಟ್ಟ ಸನ್ಮಾರ್ಗವೇ ಕಾರಣ. ಸಂವಿಧಾನದ ತಳಹದಿಯಿಲ್ಲದಿದ್ದರೆ ಇಷ್ಟೊತ್ತಿಗೆ ಪರಿಸ್ಥಿತಿ ಊಹಿಸಲಸಾಧ್ಯ. ಸಂವಿಧಾನದ ನೆರಳಲ್ಲಿ ರಕ್ಷಣೆ ಪಡೆದವರು ಅದರ ಕೃಪಾಕಟಾಕ್ಷದಿಂದ ಅಧಿಕಾರಕ್ಕೆ ಏರಿದವರು ಅದನ್ನೇ ಬದಲಾವಣೆ ಮಾಡಿಕೊಂಡು ಯುಎಪಿಎ ಎಂಬ ಕ್ರೂರ ಕಾನೂನನ್ನು ಜಾರಿಗೆ ತಂದರು. ದೇಶದ ರಕ್ಷಣೆಗೆ ಬಳಕೆಯಾಗಬೇಕಾದ ಕಾನೂನು ರಾಜಕೀಯ ಲಾಭಕ್ಕಾಗಿ ದುರುಪಯೋಗವಾಗಲಾರಂಭಿಸಿದೆ. ಸಂವಿಧಾನದತ್ತವಾಗಿ ಸ್ವಾಯತ್ತೆ ಪಡೆದ ಎಲ್ಲಾ ಸಂಸ್ಥೆಗಳು ವಿಕೃತ ವ್ಯವಸ್ಥೆಯ ಕೈನಲ್ಲಿ ನರಳಲಾರಂಭಿಸಿವೆ.

ಕಾನೂನುಗಳು ಏಕಮುಖವಾಗಿ ಚಲಾವಣೆಗೊಳ್ಳಲಾರಂಭಿಸಿವೆ. ವಿರೋಧಿಗಳನ್ನು ನೇರವಾಗಿ ಜಯಿಸಲಾರದ ಹೇಡಿತನಕ್ಕೆ ಕಠಿಣ ಕಾಯ್ದೆಗಳು ಅಸ್ತ್ರಗಳಾಗಿ ದರ್ಬಳಕೆಯಾಗುತ್ತಿವೆ. ದಲಿತರು ನ್ಯಾಯ ಕೇಳಿದರೆ ನಕ್ಸಲ್ ಗಳಾಗುತ್ತಿದ್ದಾರೆ. ಅಲ್ಪಸಂಖ್ಯಾತರು ಧ್ವನಿ ಎತ್ತಿದರೆ ಭಯೋತ್ಪಾದಕರಾಗುತ್ತಿದ್ದಾರೆ. ಹಿಂದಿನಿಂದಲೂ ಪ್ರಭುತ್ವದ ವಿರುದ್ಧ ಸದ್ದು ಮಾಡಿದ ಧ್ವನಿಗಳನ್ನು ವಿಚ್ಛಿದ್ರಕಾರಿ ಮಾರ್ಗಗಳ ಮೂಲಕವೇ ಅಡಗಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಸಹಜ ರೀತಿಯಲ್ಲಿ ಜೀವತ್ಯಾಗ ಮಾಡುವ ಪರಿಸ್ಥಿತಿಗಳನ್ನು ನಿರ್ಮಿಸಲಾಗುತ್ತಿದೆ. ಹಿಂದೆಲ್ಲಾ ಕಸ್ಟಡಿಯಲ್ಲಿದ್ದ ಸಣ್ಣ ಕಳ್ಳನ ಜೀವಹಾನಿಯಾದರೂ ಸರ್ಕಾರವೇ ಅಲುಗಾಡಿ ಹೋಗುತ್ತಿತ್ತು. ಮಾನವ ಹಕ್ಕುಗಳು ಗಟ್ಟಿನರಗಳೊಂದಿಗೆ ಸೆಟೆದು ನಿಲ್ಲುತ್ತಿದ್ದವು. ಅದೇ ನೆಲದಲ್ಲಿ ಬುಡಕಟ್ಟು ಜನರ ಹಕ್ಕಿಕ್ಕಾಗಿ ಜೀವ ಸವೆಸಿದ ಹೋರಾಟಗಾರ ನಿಷ್ಕಾರುಣ್ಯವಾಗಿ ಜೀವ ತೆತ್ತಿದ್ದಾರೆ. ಎಂಟು ತಿಂಗಳ ಕಾಲ ವಿಚಾರಣಾಧೀನ ಖೈದಿಯನ್ನಾಗಿಟ್ಟು ಕೊಂಡಿದ್ದ ಪ್ರಭುತ್ವ ವಿಚಾರಣೆಗೂ ಮೊದಲೇ ಅಪರಾಧಿಯಂತೆ ನಡೆಸಿಕೊಂಡಿತ್ತು. ಆರೋಗ್ಯವಂತರಾಗಿದ್ದ ಸ್ಟ್ಯಾನ್ ಜೈಲು ಸೇರಿದ ಮೇಲೆ ಸವೆಯಲಾರಂಭಿಸಿದರು. ಅವರನ್ನು ಕಾಡುತ್ತಿದ್ದ ಗಂಭೀರ ಸ್ವರೂಪದ ಕಾಯಿಲೆಗಳಿಗೂ ಆರಂಭದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ಬಿಜೆಪಿ ಸರ್ಕಾರದ ಕೈಗೊಂಬೆಯಾಗಿರುವ ಎನ್ ಐಎ ವಿರೋಧ ವ್ಯಕ್ತಪಡಿಸಿತ್ತು.ತಮ್ಮ ಪೂರ್ವಜರು ಸಾಹಸ ಮೆರೆದು 1818ರ ಕೊರೆಗಾಂವ್ ಯುದ್ಧದಲ್ಲಿ ಸಾಧಿಸಿದ ಜಯವನ್ನು ದಲಿತರು ಸಂಭ್ರಮದಿಂದ ಆಚರಿಸುತ್ತಿದ್ದರು. ಆ ಆಚರಣೆಯನ್ನು ಆರಂಭಿಸಿದ್ದೇ ಬಾಬಾ ಸಾಹೇಬ್ ಅಂಬೇಡ್ಕರ್. ಅಂದಿನಿಂದಲೂ ಮಹಾರಾಷ್ಟ್ರದಲ್ಲಿ ಪ್ರತಿ ವರ್ಷವೂ ಆಚರಣೆ ನಡೆದುಕೊಂಡು ಬರುತ್ತಿತ್ತು.

2018ರ ಜನವರಿಯಲ್ಲೂ ಎಲ್ಗಾರ್ ಪರಿಷತ್ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. ನಿವೃತ್ತ ನ್ಯಾಯಾಧೀಶರಾದ ಬಿ.ಜಿ.ಕೊಸ್ಲೆ ಪಾಟೀಲ್, ಪಿ.ಬಿ.ಸಾವಂತ್, ಗುಜರಾತ್ ನ ಜಿಗ್ನೇಶ್ ಮೇವಾನಿ ಪ್ರಮುಖ ಭಾಷಣಕಾರರಾಗಿದ್ದರು. ಎಂದೂ ಇಲ್ಲದ ಗಲಭೆ ಅಂದು ಇದಕ್ಕಿದ್ದಂತೆ ನಡೆದಿತ್ತು. ಹಿಂಸಾಚಾರದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಶಕ್ತಿಗಳನ್ನು ಮರತೇ ಬಿಟ್ಟ ಸರ್ಕಾರ ಗಲಭೆಯನ್ನೇ ನೆಪ ಮಾಡಿಕೊಂಡು ಪ್ರಗತಿಪರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದವರ ಮೇಲೆ ಮುಗಿಬಿತ್ತು. ಘಟನೆ ನಡೆದ ಮಾರನೇಯ ದಿನವಾದ ಜನವರಿ 2ರಂದು ಎಫ್ ಐಆರ್ ದಾಖಲಿಸಿದ ಮಹಾರಾಷ್ಟ್ರ ಸರ್ಕಾರ, ಸಮಾಜಪರ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದವರನ್ನು ಬಂಧಿಸಿ ಜೈಲಿಗಟ್ಟಲಾರಂಭಿಸಿತ್ತು. ಆರ್ ಎಸ್ ಎಸ್ ಥಿಂಕ್ ಟ್ಯಾಂಕ್ ಸಮಿತಿಯಾದ ಫೋರಂ ಫಾರ್ ಇಂಟೆಗ್ರೆಡ್ ನ್ಯಾಷನಲ್ ಸೆಕ್ಯೂರಿಟಿ ಸಂಸ್ಥೆ ತನಿಖೆ ಮಾಡಿ ಘಟನೆಯ ಹಿಂದೆ ನಕ್ಸಲರ ಕೈವಾಡ ಇದೆ, ಕೊರೆಗಾಂವ್ ನಲ್ಲಿ ಹಿಂಸಾಚಾರ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಫರ್ಮಾನನ್ನು ಹೊರಡಿಸಿಬಿಟ್ಟಿತ್ತು. ಅದನ್ನೇ ಪರಮವೇಧ್ಯ ಎಂದು ಭಾವಿಸಿದ್ದ ದೇವೇಂದ್ರ ಪಡ್ನವೀಡ್ ಸರ್ಕಾರದ ಪೊಲೀಸರು ತನಿಖೆ ಆರಂಭಿಸಿದರು.

ಮೊದಲು ಎಫ್ ಐಆರ್ ನಲ್ಲಿ ಸಂಭಾಜಿ ಭಿದೆ, ಮಿಲಿಂದ್ ಏಕೋಟೆ ಅವರ ಹೆಸರನ್ನು ಸೇರಿಸಲಾಯಿತು. ಪುಣೆ ಜಿಲ್ಲೆಯ ಗ್ರಾಮಾಂತರ ಪೊಲೀಸರು, 2018ರ ಮಾರ್ಚ್ 14ರಂದು ಮಿಲಿಂದ್ರನ್ನು ಬಂಧಿಸಿದರು. ತನಿಖೆಗೆ ಕಾನೂನು ಬಾಹಿರ ಚಟುವಟಿಕೆಗಳ ತಿದ್ದುಪಡಿ ಕಾಯ್ದೆ (ಯುಎಪಿಎ) ಹಿಡಿದು ಹೊರಟ ಪೊಲೀಸರು ಪ್ರಭುತ್ವ ಹೇಳಿದವರನ್ನೆಲ್ಲಾ ಹಿಡಿದು ತಂದು ಜೈಲಿನಲ್ಲಿ ಕೂರಿಸಲಾರಂಭಿಸಿತ್ತು. ಇದೇ ಘಟನೆಯನ್ನು ನೆಪವಾಗಿಟ್ಟುಕೊಂಡು ಒಂದು ಚಳವಳಿಯನ್ನೇ ನಿರ್ನಾಮಮಾಡಲು ಯೋಜನೆ ರೂಪುಗೊಂಡಿತ್ತು. ಅದರ ಪ್ರಕಾರ ಜೂನ್ 8ರಂದು ನಾಗಪುರ್ ದಲಿತ ನಾಯಕ ಹಾಗೂ ವಕೀಲ ಸುರೇಂದ್ರ ಗಡ್ಲಿಂಗ್, ನಟ ಹಾಗೂ ಪತ್ರಕರ್ತ ಸುದೀರ್ ಧವಲೆ, ಸಾಮಾಜಿಕ ಹೋರಾಟಗಾರ ರೋಣ ವಿಲ್ಸನ್, ನಾಗಪುರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಸೋಮಸೇನ್, ಸಾಮಾಜಿಕ ಕಾರ್ಯಕರ್ತ ಮಹೇಶ್ ರೌತ್ ರನ್ನು ಬಂಧಿಸಿತ್ತು.

ದೆಹಲಿಯಲ್ಲಿ ಕುಳಿತಿದ್ದ ಪ್ರಭುತ್ವದ ಪೈಶಾಚಿಕ ಯೋಚನೆಗಳು ಇದ್ದಕ್ಕಿದ್ದಂತೆ ಕೆರಳಿದ್ದವು. ಕೊರೆಗಾಂವ್ ಸಂಭ್ರಮಾಚರಣೆಗೆ ನಕ್ಸಲ್ ನಂಟನ್ನು ಕಲ್ಪಿಸಲಾಯಿತು. ದೇಶಾದ್ಯಂತ ಪ್ರಗತಿಪರ ಹಾಗೂ ಜೀವಪರ ಯೋಚಿಸುವ ಮುಂಚೂಣಿ ನಾಯಕರನ್ನು ಗುರಿ ಮಾಡಿ ಶೋಧ ನಡೆಸಲಾಯಿತು. ಅದರ ಭಾಗವಾಗಿ ತೆಲಂಗಾಣದಲ್ಲಿ ವರವರರಾವ್, ಚತ್ತೀಸ್ ಗಡದಲ್ಲಿ ವಕೀಲೆ ಸುಧಾ ಭಾರಧ್ವಾಜ್, ಮತ್ತೊಬ್ಬ ವಕೀಲ ಅರುಣ್ ಫೆರಾರಿಯಾ, ಗೌತಮ್ ನವಲಖಾ ಮತ್ತು ವೆರ್ನಾನ್ ಗೋನ್ ಸ್ಲಾವ್ ರನ್ನು ಗೃಹ ಬಂಧನದಲ್ಲಿಡಲಾಯಿತು, ಅಕ್ಟೋಬರ್ 26ರಂದು ಸುಧಾ ಭಾರಧ್ವಾಜ್ , ಅರುಣ್ ಫೆರಾರಿಯ, ವೆರ್ನಾನ್ ರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು. ನವೆಂಬರ್17ರಂದು ವರವರರಾವ್ ರನ್ನು ಬಂಧಿಸಲಾಯಿತು. ಬಳಿಕ ಒಂದು ವಾರದಲ್ಲೇ ಐದು ಮಂದಿ ಚಳುವಳಿಗಾರರನ್ನು ಒಳಗೊಂಡು 10 ಮಂದಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಈ ನಾಯಕರು ಸಂಚು ರೂಪಿಸಿದ್ದರು ಎಂಬ ಗಂಭೀರ ಆರೋಪವನ್ನು ಹೊರಿಸಲಾಯಿತು. ಪ್ರಭುತ್ವದ ವಿಕೃತಿ ಎಷ್ಟು ರಾಕ್ಷಸಾಕೃತಿಯಾಗಿತ್ತೆಂದರೆ 2020ರ ಏಪ್ರಿಲ್ 14ರಂದು ಬಾಬಾಸಾಹೇಬರ 129ನೇ ಪರಿನಿಬ್ಬಾಣದ ದಿನವೇ ಅವರ ಮೊಮ್ಮಗ ಆನಂದ್ ತೆಲ್ತುಂಬೆ ಅವರನ್ನು ಬಂಧಿಸಲಾಯಿತು. ಅಂಬೇಡ್ಕರ್ ಆರಂಭಿಸಿದ ಕೊರೆಗಾಂವ್ ಸಂಭ್ರಮಾಚರಣೆಯನ್ನು ಸುಲಲಿತವಾಗಿ ನಡೆಯಲು ಬಿಡದೆ ಹಿಂಸಾಚಾರ ನಡೆಸಿ, ಅಂಬೇಡ್ಕರ್ ಅವರ ಮೊಮ್ಮಗನನ್ನು ಅದೇ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿ ಬಂಧಿಸಲಾಗಿದೆ. 2020ರ ಅಕ್ಟೋಬರ್ 9ರಂದು 83 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ ಅವರನ್ನು ಬಂಧಿಸಲಾಯಿತು. ಆನಂದ್ ತೆಲ್ತುಂಬೆ ತೆಲಂಗಾಣದಲ್ಲಿ ನಿಷೇಧಿತ ಆರ್ ಡಿಎಫ್ ಸಂಘಟನೆಯ ನಂಟು ಹೊಂದಿದ್ದಾರೆ ಎಂಬ ಆರೋಪ ಹೊರಿಸಿದರೆ, ಸ್ಟ್ಯಾನ್ ಮತ್ತು ಸುಧಾ ಭಾರಧ್ವಾಜ್ ಅವರು ಮಾವೋಯಿಸ್ಟ್ ಗಳ ಮುಂದಾಳುಗಳು ಎಂಬ ಆರೋಪವನ್ನು ಎನ್ ಐ ಎ ಮಾಡಿತ್ತು.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಸರ್ಕಾರ ಚುನಾವಣೆಯಲ್ಲಿ ಸೋಲು ಕಂಡಿತ್ತು. ಹೊಸದಾಗಿ ಶಿವಸೇನೆ, ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳ ಮಹಾವಿಕಾಸ ಅಘಾಡಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ತನ್ನ ವರಸೆ ಬದಲಿಸಿತ್ತು. ಆವರೆಗೂ ಪುಣೆ ಜಿಲ್ಲೆಯ ಗ್ರಾಮಾಂತರ ಪೊಲೀಸರು, ಎಸ್ ಐ ಟಿ ಅಧಿಕಾರಿಗಳು ನಡೆಸಿದ ತನಿಖೆಯನ್ನು 2020ರ ಜನವರಿಯಲ್ಲಿ ಏಕಾಏಕಿ ರಾಷ್ಟ್ರೀಯ ತನಿಖಾ ದಳ ತನ್ನ ವಶಕ್ಕೆ ತೆಗೆದುಕೊಂಡಿತ್ತು. ನಮ್ಮ ಸಹಮತ ಪಡೆಯದೆ ತನಿಖೆಯನ್ನು ಹೈಜಾಕ್ ಮಾಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಬಾಯಿ ಬಡಿದುಕೊಂಡಿತು. ಕೇಂದ್ರ ಸರ್ಕಾರ ಕೇಳಿಸಿಕೊಳ್ಳಲಿಲ್ಲ. 10 ಸಾವಿರ ಪುಟಗಳ ದೋಷಾರೋಪಣಾ ಪಟ್ಟಿಯನ್ನು ಎನ್ ಐ ಎ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರಲ್ಲಿ ಹೊಸದಾಗಿ ಸ್ಟ್ಯಾನ್ ಸ್ವಾಮಿ ಅವರನ್ನು ಸೇರ್ಪಡೆ ಮಾಡಲಾಯಿತು.

ವರವರರಾವ್ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ನ್ಯಾಯಾಲಯದ ಮುಂದೆ ಪದೇ ಪದೇ ಮನವಿ ಮಾಡಿ ಕೊನೆಗೂ ಜಾಮೀನು ಪಡೆಯಲು ಯಶಸ್ವಿಯಾದರು. ಸ್ಟ್ಯಾನ್ ಸ್ವಾಮಿ ತಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ಪರಿಪರಿಯಾಗಿ ಬೇಡಿಕೊಂಡರು. ವ್ಯವಸ್ಥೆ ಕರುಣೆ ತೋರಿಸಲಿಲ್ಲ. ಎನ್ ಐ ಎ ಜಾಮೀನಿಗೆ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಅನಾರೋಗ್ಯ ಪೀಡಿತ ವಯೋವೃದ್ಧ ಸ್ಟ್ಯಾನ್ ರ ಅನಾರೋಗ್ಯದ ಬಗ್ಗೆಯೇ ಎನ್ಐಎ ಸಂಶಯ ವ್ಯಕ್ತಪಡಿಸಿತು.

ಯುಎಪಿಎ ಕಾಯ್ದೆಯಡಿ ಬಂಧಿಸಿದ ಪ್ರಮುಖ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರಾಗಲಿ ಎನ್ ಐಎ ಅಧಿಕಾರಿಗಳಾಗಲಿ ತಮ್ಮ ವಶಕ್ಕೆ ಪಡೆದಿಲ್ಲ. ವಿಚಾರಣೆಯನ್ನೇ ಮಾಡದೆ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಬಂಧಿತರ ಪೈಕಿ ಕೆಲವರ ಮೇಲೆ ಈ ಮೊದಲು ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡಿದ ಆರೋಪಗಳು ಕೇಳಿ ಬಂದಿದ್ದವು. ಆದರೆ ಅವ್ಯಾವು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಆದರೂ ಬಹಳಷ್ಟು ವರ್ಷಗಳ ಕಾಲ ಅವರನ್ನು ಜೈಲಿನಲ್ಲಿ ಇಡಲಾಗಿತ್ತು.

ಕೊರೆಗಾಂವ್ ಪ್ರಕರಣ ಒಂದರಲ್ಲೇ ಅಲ್ಲ ಈ ದೇಶದಲ್ಲಿ ಸಾವಿರಾರು ಮಂದಿ ನಕ್ಸಲ್, ಭಯೋತ್ಪಾದನೆ ಹೆಸರಿನಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ನಿಜವಾದ ನಕ್ಸಲರನ್ನು, ಭಯೋತ್ಪಾದಕರನ್ನು ಶಿಕ್ಷಿಸಲು ಯಾರು ಅಡ್ಡಿ ಪಡಿಸುವುದಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ವೈಚಾರಿಕ ಎದರಾಳಿಗಳನ್ನು ಹಣೆಯಲು ಸುಳ್ಳು ಆರೋಪ ಹೊರಿಸಿ ಜೈಲಿನ ಕತ್ತಲಕೋಣೆಯಲ್ಲಿ ಕೊಳೆಯುವಂತೆ ಮಾಡುತ್ತಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಬೆಚ್ಚಿ ಬೀಳಿಸುತ್ತವೆ. ಕಳೆದ ಎಂಟು ವರ್ಷಗಳಲ್ಲಿ ಪ್ರತಿ ವರ್ಷ 1500 ಮಂದಿ ಸರಾಸರಿ ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ. ಅರ್ಥಾತ್ ಸೂಕ್ತ ಚಿಕಿತ್ಸೆ, ಸೌಲಭ್ಯಗಳನ್ನು ನೀಡದೆ ಸಾವಿಗೆ ಪ್ರಭುತ್ವ ಕಾರಣವಾಗಿದೆ ಎಂದರೆ ತಪ್ಪಿಲ್ಲ. 2019-20ರಲ್ಲಿ 139 ಪೊಲೀಸ್ ಬಂಧನದ ಅವಧಿಯಲ್ಲಿ, 1576 ಮಂದಿ ನ್ಯಾಯಾಂಗ ಬಂಧನದ ಅವಧಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ದಲಿತರು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ಬೇರೆ ಹೇಳಬೇಕಿಲ್ಲ.
ರಾಷ್ಟ್ರೀಯ ಅಪರಾಧ ದಾಖಲೆಗಳ ಮಾಪನ ಸಂಸ್ಥೆಯ ಪ್ರಕಾರ, ದೇಶದಲ್ಲಿ 3.30 ಲಕ್ಷ ಮಂದಿ ವಿವಿಧ ಪ್ರಕರಣಗಳಲ್ಲಿ ವಿಚಾರಣೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಹತ್ತು ತಿಂಗಳ ಲಾಕ್ ಡೌನ್ ಅವಧಿಯಲ್ಲೂ ಪ್ರಭುತ್ವದ ದೌರ್ಜನ್ಯ ನಿಂತಿಲ್ಲ. ಲಾಕ್ ಡೌನ್ ಉಲ್ಲಂಘನೆಯ ನೆಪದಲ್ಲಿ ಪೊಲೀಸರು ಲಾಠಿ ಬೀಸಿದ್ದು ಒಂದೆಡೆಯಾದರೆ, 77 ಪೊಲೀಸ್ ಕಸ್ಟಡಿ ಸಾವು ಮತ್ತು 1338 ನ್ಯಾಯಾಂಗ ಬಂಧನದ ಸಾವುಗಳು, 62 ನ್ಯಾಯಾಂಗಯೇತರ ಸಾವುಗಳಾಗಿವೆ ಎಂದು ಮಾನವ ಹಕ್ಕುಗಳ ಆಯೋಗ ತಿಳಿಸಿದೆ.

ಅಮಾಯಕರ ಸಾವುಗಳು, ಬಂಧನ ವಿಚಾರಣೆಯ ವಿರುದ್ಧ ಧ್ವನಿ ಎತ್ತುತ್ತಿದ್ದಂತೆ ಅವರನ್ನು ಸಮಾಜದ್ರೋಹಿಗಳ ಗುಂಪಿಗೆ ಸೇರಿಸಲಾಗುತ್ತದೆ. ವ್ಯವಸ್ಥೆಯ ದ್ವೇಷಕ್ಕೆ ಸಿಲುಕಿ ಜೈಲು ಪಾಲಾಗುವ ಅದೆಷ್ಟೋ ಜನ ತಮ್ಮ ಅಮೂಲ್ಯ ಜೀವಿತಾವಧಿಯನ್ನೇ ಕಳೆದುಕೊಂಡಿರುತ್ತಾರೆ. ಆರೋಪ ಸಾಬೀತಾಗದೆ ಹೊರ ಬಂದರೂ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುಲಾಗದೆ ಕಳಂಕಕ್ಕೆ ಸಿಲುಕಿ ಜೀವನ ಪೂರ್ತಿ ನರಳುವಂತಹ ವಾತಾವರಣ ನಿರ್ಮಾಣವಾಗಿರುತ್ತದೆ. ನಿಜವಾದ ಅಪರಾಧಿಗೆ ಶಿಕ್ಷೆಯಾದರೆ ಅದಕ್ಕೆ ಆಕ್ಷೇಪಣೆ ಇಲ್ಲ. ರಾಜಕೀಯ ದ್ವೇಷಕ್ಕಾಗಿ ನಕ್ಸಲ್, ಭಯೋತ್ಪಾದನೆಯ ಪಟ್ಟ ಕಟ್ಟಿ ಬದುಕು ನಾಶ ಮಾಡುವ ಮಾಫಿಯಾದ ವಿರುದ್ಧ ಜಾಗೃತಿ ಅಗತ್ಯವಿದೆ. ಸುಳ್ಳು ಆರೋಪ ಹೊರಿಸಿ ಜೈಲಿಗೆ ನೂಕಿದ ಅಧಿಕಾರಿ ಆರೋಪ ಸಾಬೀತು ಮಾಡದಿದ್ದರೆ ಸದರಿ ಅಧಿಕಾರಿಯ ವಿರುದ್ಧವೂ ಐಪಿಸಿ ಸೆಕ್ಷನ್ ಗಳ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತಹ ವಾತಾವರಣ ನಿರ್ಮಾಣವಾಗಬೇಕಿದೆ.

ಸಂವಿಧಾನದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂಬ ಕಾರಣಕ್ಕೆ ಜನ ತಾಳ್ಮೆಯಿಂದ ಇದ್ದಾರೆ. ಇಂದಲ್ಲಾ ನಾಳೆ ಸರಿ ಹೋಗುತ್ತದೆ ಎಂಬ ಜನರ ತಾಳ್ಮೆ ದೌರ್ಬಲ್ಯವಲ್ಲ. ಆಡಳಿತ ಮಾಡುವವರು ತಪ್ಪುಗಳ ಮಿತಿ ದಾಟಿ ಹೋದರೆ ಜನ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ. ಫಾದರ್ ಸ್ಟ್ಯಾನ್ ಸ್ವಾಮಿ ಅವರ ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳಲು ಪ್ರಜ್ಞಾವಂತ ನಾಗರಿಕರು ಪಣ ತೊಡಬೇಕಾಗಿದೆ.

Join Whatsapp
Exit mobile version