ದೇಶದ ಅತಿದೊಡ್ಡ ಕ್ರೀಡಾಕೂಟಕ್ಕೆ ಭಾನುವಾರ ಉಪರಾಷ್ಟ್ರಪತಿ ಅವರಿಂದ ಚಾಲನೆ: ಸಚಿವ ಡಾ.ನಾರಾಯಣಗೌಡ

Prasthutha|

ಬೆಂಗಳೂರು: ಕರ್ನಾಟಕದ ಹೆಮ್ಮೆ, ಐತಿಹಾಸಿಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ತಿಳಿಸಿದರು. ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಡಾ.ನಾರಾಯಣಗೌಡ ಅವರು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಕ್ರೀಡಾಕೂಟದ ಸಿದ್ಧತೆ ಕುರಿತು ಮಾಹಿತಿ ನೀಡಿದರು.

- Advertisement -


ಭಾನುವಾರ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಅನುರಾಗ್ ಠಾಕೂರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾಜ ಹೊರಟ್ಟಿಸೇರಿದಂತೆ ಹಲವು ಗಣ್ಯರು ಚಾಲನೆ ನೀಡಲಿದ್ದಾರೆ. ಮೇ 3ರಂದು ಜೈನ್ ಗ್ಲೋಬಲ್ ಕ್ಯಾಂಪಸ್ನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಭಾರತ ಸರಕಾರದ ಸಂಸದೀಯ ವ್ಯವಹಾರಗಳ ಪ್ರಹ್ಲಾದ್ ಜೋಶಿ ಹಾಗೂ ಇತರ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಡಾ.ನಾರಾಯಣಗೌಡ ಮಾಹಿತಿ ನೀಡಿದರು.


ಕೇಂದ್ರ ಹಾಗೂ ರಾಜ್ಯ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ(SAI), ಜೈನ್ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಎಲ್ಲಾ ತಯಾರಿ ಮಾಡಲಾಗಿದ್ದು, ಕ್ರೀಡಾ ಕೇಂದ್ರಗಳು, ಮೈದಾನಗಳು ಸಜ್ಜಾಗಿವೆ. ಕ್ರೀಡಾಕೂಟದಲ್ಲಿ ದೇಶದಾದ್ಯಂತ 200 ವಿಶ್ವವಿದ್ಯಾನಿಲಯಗಳಿಂದ ಸುಮಾರು 4,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ನಮ್ಮ ಕರ್ನಾಟಕದಿಂದ ಒಟ್ಟು 12 ವಿವಿಗಳಿಂದ 291 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅಥ್ಲೆಟಿಕ್ಸ್, ಈಜು, ಕರಾಟೆ, ಯೋಗ, ಮಲ್ಲಕಂಬ ಕ್ರೀಡೆಗಳಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಈಜುಪಟು ಶ್ರೀಹರಿ ನಟರಾಜನ್, ಒಲಂಪಿಯನ್ ಶೂಟರ್ಗಳಾದ ದಿವ್ಯಾನೇಶ್ ಸಿಂಗ್, ಮನು ಬಾಕರ್, ಒಲಂಪಿಯನ್ ಅಥ್ಲೆಟಿಕ್ಸ್ ದೂತಿ ಚಾಂದ್ ಸೇರಿದಂತೆ ಹಲವು ಸ್ಟಾರ್ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿರುವ ಸಂತಸದ ವಿಚಾರ ಎಂದು ಸಚಿವರು ಹೇಳಿದರು.

- Advertisement -

ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ವೈಭವವನ್ನು ಪ್ರತಿನಿಧಿಸುವ ʼಸಾಂಸ್ಕೃತಿಕ ಕಾರ್ಯಕ್ರಮʼಗಳನ್ನು ಪ್ರದರ್ಶಿಸಲಾಗುವುದು. ಲೇಸರ್ ಲೈಟ್ ಪ್ರದರ್ಶನ, ಚಂದನ್ ಶೆಟ್ಟಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ, ಕರ್ನಾಟಕದ ಸಾಂಸ್ಕೃತಿಕ, ಜಾನಪದ ಕಲಾ ಪ್ರದರ್ಶನ & ಭಾರತದ ವಿಭಿನ್ನ ಡೊಳ್ಳು ವಾದನ, ಮಲ್ಲಕಂಬ ಪ್ರದರ್ಶನ, ವಂದೇ ಮಾತರಂ ಗೀತೆಯೊಂದಿಗೆ ʼಸ್ವಾತಂತ್ರ್ಯ ಅಮೃತ ಮಹೋತ್ಸವʼದ ನೃತ್ಯ ಪ್ರದರ್ಶನ, ಕಿಂಗ್ಸ್ ಯುನೈಟೆಡ್ ನೃತ್ಯ ತಂಡದವರಿಂದ ʼಯುವ ಶಕ್ತಿಯ ಸಂದೇಶʼ ಸಾರುವ “ಆಕ್ರೋಬ್ಯಾಟಿಕ್” ಪ್ರದರ್ಶನ ಇರಲಿದೆ ಎಂದ ಸಚಿವ ಡಾ.ನಾರಾಯಣಗೌಡ ಮಾಹಿತಿ ನೀಡಿದರು.


ಕ್ರೀಡಾಕೂಟದ ಶುಭ ಸ್ಮರಣೆಯಲ್ಲಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ವಿಶೇಷವಾದ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗುತ್ತಿದೆ. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಜೈನ್ ವಿವಿ ಚೆನ್ನರಾಜ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.

Join Whatsapp
Exit mobile version