Home ಕರಾವಳಿ ದ್ವಿತೀಯ ಪಿಯುಸಿ ಪರೀಕ್ಷೆ: ರಸ್ತೆಯಲ್ಲೇ ಶಿರವಸ್ತ್ರ ತೆಗೆಸಿದ ಪೊಲೀಸರು

ದ್ವಿತೀಯ ಪಿಯುಸಿ ಪರೀಕ್ಷೆ: ರಸ್ತೆಯಲ್ಲೇ ಶಿರವಸ್ತ್ರ ತೆಗೆಸಿದ ಪೊಲೀಸರು

ಮಂಗಳೂರು: ರಾಜ್ಯಾದ್ಯಂತ  ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ ಪ್ರಾರಂಭವಾಗಿದ್ದು, ತರಗತಿಯೊಳಗೆ ಮಾತ್ರ ಹಿಜಾಬ್ ನಿಷೇಧ ಎಂದು ಶಿಕ್ಷಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದ್ದರೂ, ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಮಾರ್ಗ ಮಧ್ಯೆಯೇ ನಿಲ್ಲಿಸಿ ಹಿಜಾಬ್ ತೆಗೆಸಿದ ಘಟನೆ ಮಂಗಳೂರಿನ ಕಾರ್ ಸ್ಟ್ರೀಟ್ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಈ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

ತರಗತಿಗಳಲ್ಲಿ ಮಾತ್ರ ಶಿರವಸ್ತ್ರ ಧಾರಣೆಗೆ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಮಂಗಳೂರಿನ ಪರೀಕ್ಷಾ ಕೇಂದ್ರದ ಆವರಣದ ಹೊರಗೆಯೇ ಪೊಲೀಸರನ್ನಿಟ್ಟು ಬಲವಂತವಾಗಿ ವಿದ್ಯಾರ್ಥಿನಿಗಳ ಶಿರವಸ್ತ್ರ ತೆಗೆಯುವಂತೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪೊಲೀಸರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲೂ ತೀವ್ರ ಆಕ್ಷೇಪಕ್ಕೆ ಒಳಗಾಗಿದೆ. ಕಾಲೇಜಿನ ಆವರಣದ ಒಳಗೆ ವಿದ್ಯಾರ್ಥಿನಿಯರು ಪ್ರವೇಶಿಸಿದ ಬಳಿಕ ಅವರಿಗೆ ಹಿಜಾಬ್ ತೆಗೆಯಲು ಅವಕಾಶ ಕಲ್ಪಿಸಬೇಕಿತ್ತು. ಅನಾಗರಿಕರಂತೆ ರಸ್ತೆ ಬದಿಯಲ್ಲಿ ಹಿಜಾಬ್ ತೆಗೆಸಿರುವುದು ಖಂಡನೀಯ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಉತ್ತರ ವೃತ್ತ ನಿರೀಕ್ಷಕ ರಾಘವೇಂದ್ರ, ನಮ್ಮ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಹಿಜಾಬ್ ಅನ್ನು ತೆಗೆಯಲು  ಹೇಳಿಲ್ಲ. ವಿದ್ಯಾರ್ಥಿಗಳೇ ಬಂದು ಹಿಜಾಬ್ ಎಲ್ಲಿ ತೆಗೆಯಬೇಕು ಎಂದು ಕೇಳಿದಾಗ, ನಮ್ಮ ಸಿಬ್ಬಂದಿ ಕಾಲೇಜು ಆವರಣದೊಳಗೆ ಎನ್ನುತ್ತಾರೆ. ಆದರೆ ಇತರ ವಿದ್ಯಾರ್ಥಿಗಳು ಸಮೀಪದ ಬಸ್ ನಿಲ್ದಾಣದ ಬಳಿ ಇದ್ದಾರೆ. ಒಟ್ಟಿಗೆ ಅಲ್ಲಿಯೇ ತೆಗೆದು ಬರುತ್ತೇವೆ ಎಂದು ಅವರೇ ಹೊರಗಡೆ ತೆಗೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Join Whatsapp
Exit mobile version