ನವದೆಹಲಿ: ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿರುವ ಸಂಸದ ವರುಣ್ ಗಾಂಧಿ, ನಿರುದ್ಯೋಗ ಸಮಸ್ಯೆಯ ಬಗ್ಗೆ ತಮ್ಮದೇ ಪಕ್ಷವನ್ನು ವರುಣ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸರಕಾರ 2 ಕೋಟಿ ಜನರಿಗೆ ಉದ್ಯೋಗಗಳನ್ನು ನೀಡಿಲ್ಲ, ಜೊತೆಗೆ ಯಾರೊಬ್ಬರ ಬ್ಯಾಂಕ್ ಖಾತೆಗೆ ಹಣವನ್ನೂ ಹಾಕಿಲ್ಲ. ರೈತರ ಆದಾಯವೂ ದ್ವಿಗುಣಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಉದ್ಯೋಗಗಳು ಖಾಸಗೀಕರಣದಿಂದಾಗಿ ಸೀಮಿತವಾಗುತ್ತಿದೆ, ಈ ಬೆಳವಣಿಗೆಯಿಂದಾಗಿ ಭಾರತದ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆ ವರುಣ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಕನಸುಗಳು ದೊಡ್ಡದಾಗಿದೆ. ಆದರೆ ಸಂಪನ್ಮೂಲಗಳು ಸೀಮಿತವಾಗಿವೆ. ದೇಶದಲ್ಲಿ 1.5 ಕೋಟಿ ಹುದ್ದೆಗಳು ಖಾಲಿ ಇದ್ದರೂ ನಿರುದ್ಯೋಗಿಗಳು ಹೆಚ್ಚುತ್ತಿದ್ದು. ಕೋಟ್ಯಂತರ ನಿರುದ್ಯೋಗಿಗಳು ಮುಂದೆ ಏನಾಗಲಿದ್ದಾರೆ ಎಂದು ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.
ಸಂವಿಧಾನವು ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಪಡೆಯಬೇಕೆಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಶ್ರಮಿಸಿದಾಗ ಇದು ಸಾಧ್ಯ, ನಮ್ಮ ಹೋರಾಟ ಉದ್ಯೋಗ ಮತ್ತು ಆರ್ಥಿಕ ಸಮಾನತೆಗಾಗಿ ಆಗಿದೆ ಎಂದು ವರುಣ್ ಗಾಂಧಿ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ಪೈಪೋಟಿಯನ್ನು ಬಿಟ್ಟು ದೇಶದ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.