ಮಂಗಳೂರು: ಪ್ರೇಮ ವೈಫಲ್ಯದ ಕಾರಣದಿಂದ ಮೊಬೈಲ್ ಟವರ್ ಏರಿ ಭಗ್ನಪ್ರೇಮಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಹೊರವಲಯದ ಅಡ್ಯಾರು ಎಂಬಲ್ಲಿ ನಡೆದಿದೆ.
ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿರುವ ಅಡ್ಯಾರ್ ಸಮೀಪದ ಸುಧೀರ್ ಎಂಬಾತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ನಿರ್ಲಕ್ಷ್ಯ ತೋರಿದರೂ ಸುಧೀರ್ ಪದೇ ಪದೇ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿಯು ಸುಧೀರ್ ವಿರುದ್ಧ ಬಂಟ್ವಾಳ ಠಾಣೆಗೆ ದೂರು ನೀಡಿದ್ದಳು. ಮನ ನೊಂದ ಆತ ಆತ್ಮಹತ್ಯೆ ಮಾಡುವುದಾಗಿ ಟವರ್ ಏರಿ ಅವಾಂತರ ಸೃಷ್ಟಿಸಿದ್ದಾನೆ.
ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಕೆಳಗಿಳಿಸಲು ಹರಸಾಹಸ ಪಟ್ಟರೂ ಯಾವುದೇ ಕ್ರಮ ಫಲಕಾರಿಯಾಗಲಿಲ್ಲ. ಕೊನೆಗೆ ಪ್ರೀತಿಸಿದ ಹುಡುಗಿಯೇ ಬಂದು, ದೂರು ವಾಪಸ್ ತೆಗೆದುಕೊಳ್ಳುವೆ ಎಂದು ಭರವಸೆ ನೀಡಿದ ಬಳಿಕ ಕೆಳಗಿಳಿದು ತನ್ನ ಪ್ರಿಯತಮೆ ಜೊತೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.