Home ಟಾಪ್ ಸುದ್ದಿಗಳು ವಾರಣಾಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ; ಮತ್ತೆ ಹೆಡೆಯೆತ್ತಿದ ಧಾರ್ಮಿಕ ವಿವಾದ

ವಾರಣಾಸಿ: ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ; ಮತ್ತೆ ಹೆಡೆಯೆತ್ತಿದ ಧಾರ್ಮಿಕ ವಿವಾದ

ಲಕ್ನೋ: ವ್ಯಾಪಕ ಪ್ರತಿಭಟನೆ ನಡುವೆಯೇ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ- ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ಕಾರ್ಯ ಆರಂಭವಾಗಿದೆ. ಸಮೀಕ್ಷೆಯಲ್ಲಿ ವೀಡಿಯೊ ಚಿತ್ರೀಕರಣ ಮತ್ತು ತಪಾಸಣೆ ಒಳಗೊಂಡಿದ್ದು, ಇದು ದಶಕಗಳಷ್ಟು ಹಳೆಯ ಧಾರ್ಮಿಕ ವಿವಾದವನ್ನು ಮತ್ತೆ ಕೆದಕಿದೆ.

ಸ್ಥಳೀಯ ವಾರಣಾಸಿ ನ್ಯಾಯಾಲಯವು ಎ.29ರಂದು ಈ ಬಗ್ಗೆ ಆದೇಶ ನೀಡಿದ್ದು, ಮುಂದಿನ ಎರಡು- ಮೂರು ದಿನಗಳ ಕಾಲ ಸಮೀಕ್ಷೆ ಮುಂದುವರಿಯಲಿದೆ ಎಂದು ನ್ಯಾಯಾಲಯದಲ್ಲಿ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸಿರುವ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ.

ಈ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜ್ಞಾನವಾಪಿ ಮಸೀದಿಯ ಮೇಲ್ನೋಟ  ವಹಿಸುತ್ತಿರುವ ಅಂಜುಮನ್ ಇಂತೆಝಾಮಿಯಾ ಸಮಿತಿ, “ಮಸೀದಿ ಪ್ರದೇಶದಲ್ಲಿ ವೀಡಿಯೊಗ್ರಫಿ ನಿಷೇಧಿಸಿರುವುದರಿಂದ ಇದಕ್ಕೆ ನಮ್ಮ ವಿರೋಧ ಇದೆ, ಈ ಕ್ರಮದ ವಿರುದ್ಧ ನ್ಯಾಯಾಲಯವನ್ನು ಸಮೀಪಿಸುತ್ತೇವೆ  ಎಂದು ಸಮಿತಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಶಿ ವಿಶ್ವನಾಥ್- ಜ್ಞಾನವಾಪಿ ಸಂಕೀರ್ಣದಲ್ಲಿ ಮಾ ಶೃಂಗಾರ್ ಗೌರಿ ಸ್ಥಳದಲ್ಲಿ ಪ್ರಾರ್ಥನೆ ಮತ್ತು ಪೂಜೆಗೆ ಅವಕಾಶ ಕೋರಿ ಐದು ಮಂದಿ ಮಹಿಳೆಯರು 2021ರಲ್ಲಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಎ. 29ರಂದು ವಾರಣಾಸಿ ಸಿವಿಲ್ ನ್ಯಾಯಾಲಯ ಸಮೀಕ್ಷೆಗೆ ಆದೇಶ ನೀಡಿದ್ದು, ನ್ಯಾಯಾಲಯ ನೇಮಕ ಮಾಡಿದ ಅಭಿಯೋಜಕ ಆಯುಕ್ತ ಅಜಯ್ ಕುಮಾರ್ ಮತ್ತು ತಂಡ ಈ ಸಮೀಕ್ಷಾ ಕಾರ್ಯ ಕೈಗೊಂಡಿದೆ.

Join Whatsapp
Exit mobile version