ಮಂಗಳೂರು: ಮಂಗಳೂರಿಗೆ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲು ಎಕ್ಸ್‌ಪ್ರೆಸ್ ಬರಬೇಕು ಎಂಬುದು ಹಲವರ ಬೇಡಿಕೆಯಾಗಿದೆ. ಬೇಕಾದ ವ್ಯವಸ್ಥೆಗಳನ್ನು ಸಹ ಮಂಗಳೂರು ನಿಲ್ದಾಣದಲ್ಲಿ ಮಾಡಲಾಗುತ್ತಿದೆ. ಇದೀಗ ಶೀಘ್ರವೇ ಮಂಗಳೂರು ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕ ದೊರೆಯಲಿದೆ ಎಂದು ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ Xನಲ್ಲಿ ಬರೆದಿದ್ದಾರೆ.
ಸಂಸದರು Xನಲ್ಲಿ, ಮಂಗಳೂರು – ಮಡಗಾಂ ವಂದೇ ಭಾರತ್ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
‘ಇನ್ನು ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು ಎಂದೂ ಕಟೀಲ್ ಬರೆದ್ದಾರೆ.
ನಳಿನ್ X ಮಾಹಿತಿ ನೋಡಿ ಇನ್ನೇನು ಮಂಗಳೂರಿಗೆ ವಂದೇ ಮಾತರಂ ರೈಲು ಬರಲಿದೆ ಎಂದು ಖುಷಿಪಟ್ಟವರು ಕೆಲವರಾದರೆ, ಮರಳು ಸಮಸ್ಯೆ ಶೀಘ್ರ ಇತ್ಯರ್ಥ, ಪಂಪ್ವೆಲ್ ಬ್ರಿಡ್ಜ್ ಶೀಘ್ರವೆಂದು ಹೇಳಿ ಹಲವು ವರ್ಷಗಳು ಸಂದು ಹೋದ ಬಳಿಕವಷ್ಟೇ ಬ್ರಿಡ್ಜ್ ಪೂರ್ಣಗೊಂಡದ್ದು ಮುಂತಾದ ವಿಷಯದಲ್ಲಿ ಆದಂತೆ ಇದೂ ಕೂಡ ಸಂಸದರ ‘ರೈಲು’ ಹೇಳಿಕೆ ಆಗಿರಬಹುದಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ