ನವದೆಹಲಿ: ಕೊರೊನಾ ಲಸಿಕೆ ಪ್ರಮಾಣಪತ್ರ ಜಗತ್ತನ್ನೇ ನಿಬ್ಬೆರಗಾಗಿಸಿದ್ದು ಪ್ರತಿ ಲಸಿಕೀಕರಣದ ದಾಖಲೆಗಳನ್ನು ನಿರ್ವಹಣೆ ಮಾಡಿರುವುದಕ್ಕೆ ಇಡೀ ಜಗತ್ತೇ ನಮ್ಮ ಕಡೆಗೆ ಬೆರಗಿನಿಂದ ನೋಡಿತ್ತು. ಆದರೆ ನಮ್ಮ ವಿರೋಧಿಗಳಿಗೆ ಕಂಡದ್ದು ನನ್ನ ಭಾವಚಿತ್ರ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ
ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ವೀಕ್- 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತೆ ಮಾಡಿರುವುದು ಮತ್ತು ಲಸಿಕೆ ಪಡೆದ ತಕ್ಷಣ ಪ್ರತಿಯೊಬ್ಬರ ಮೊಬೈಲ್ನಲ್ಲಿ ಲಸಿಕಾ ಪ್ರಮಾಣಪತ್ರ ಸಿಗುವಂತೆ ಮಾಡಿದ್ದು ಜಗತ್ತಿಗೇ ಆಶ್ಚರ್ಯ ಉಂಟುಮಾಡಿತ್ತು. ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಯೂ ಈ ರೀತಿಯ ಕ್ಷಿಪ್ರ ಕಾರ್ಯಾಚರಣೆ ನಡೆಯಲಿಲ್ಲ ಎಂದು ಹೇಳಿದರು.
ಡಿಜಿಟಲ್ ಇಂಡಿಯಾ ಕಲ್ಪನೆಯು ಕೋವಿಡ್ ಸಮಯದಲ್ಲಿ ತುಂಬಾ ಪ್ರಯೋಜನಕ್ಕೆ ಬಂದಿದೆ. ಇದು ಜನರ ಜೀವನವನ್ನು ಸರಳಗೊಳಿಸಿರುವುದು ಮಾತ್ರವಲ್ಲ, ಪಾರದರ್ಶಕ ಸೇವೆ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವಲ್ಲಿಯೂ ಕೆಲಸ ಮಾಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.