Home ಟಾಪ್ ಸುದ್ದಿಗಳು ಪ್ರಜಾಪ್ರಭುತ್ವ ಮೌಲ್ಯವು ಮತೀಯ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯಲ್ಲಿ ನಿರ್ಧರಿತವಾಗಿದೆ: ಹೈಕೋರ್ಟ್

ಪ್ರಜಾಪ್ರಭುತ್ವ ಮೌಲ್ಯವು ಮತೀಯ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯಲ್ಲಿ ನಿರ್ಧರಿತವಾಗಿದೆ: ಹೈಕೋರ್ಟ್

ನೈನಿತಾಳ, ಜುಲೈ 19 : ಹರಿದ್ವಾರದಲ್ಲಿ ಕಸಾಯಿಖಾನೆಗಳನ್ನು ನಿಷೇಧಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಉತ್ತರಾಖಂಡ ಉಚ್ಚ ನ್ಯಾಯಾಲಯವು ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಮೌಲ್ಯವು ಅಲ್ಲಿನ ಕಾನೂನು ಮತೀಯ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿಯಲ್ಲಿ ನಿರ್ಧರಿತವಾಗಿದೆಯೆಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಫಾದರ್ ಸ್ಟ್ಯಾನ್ ಸ್ವಾಮಿ ಸಾವು- ಪ್ರಜಾಪ್ರಭುತ್ವದ ವ್ಯವಸ್ಥಿತ ಹತ್ಯೆ

ಹರಿದ್ವಾರ ಜಿಲ್ಲೆಯಲ್ಲಿ ಕಸಾಯುಖಾನೆಗಳ ಮೇಲಿನ ನಿರ್ಬಂಧವನ್ನು ಪ್ರಶ್ನಿಸಿ ಮಂಗ್ಲೌರ್ ನಿವಾಸಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಆರ್.ಎಸ್. ಚೌಹಾನ್ ಮತ್ತು ಅಲೋಕ್ ಕುಮಾರ್ ವರ್ಮಾ ರವರನ್ನೊಳಗೊಂಡ ಪೀಠವು ಮತೀಯ ಅಲ್ಪಸಂಖ್ಯಾತರ ರಕ್ಷಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹೊಣೆಯಾಗಿದೆ ಮತ್ತು ಅಲ್ಪಸಂಖ್ಯಾತರದೊಂದಿಗಿನ ವ್ಯವಹಾರವು ಈ ದೇಶದ ನಾಗರೀಕತೆಯನ್ನು ಪ್ರತಿಪಾದಿಸಲಿದೆಯೆಂದು ತಿಳಿಸಿದರು.
ಹರಿದ್ವಾರದಂತಹ ಪ್ರದೇಶದಲ್ಲಿ ಕಸಾಯಿಖಾನೆಗಳ ನಿಷೇಧಕ್ಕೆ ಸರ್ಕಾರ ಮುಂದಾಗುತ್ತಿರುವುದು ತನ್ನ ಪ್ರಜೆಗಳ ಆಯ್ಕೆಯ ಹಕ್ಕನ್ನು ಪ್ರಶ್ನಿಸಿದಂತಾಗುತ್ತದೆಯೆಂದು ಉತ್ತರಾಖಂಡ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.


ಹರಿದ್ವಾರ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದ ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿರುವ ಮಂಗ್ಲೌರ್ ಪಟ್ಟಣದಲ್ಲಿ ಕಸಾಯಿಖಾನೆಗಳನ್ನು ನಿಷೇಧಿಸುವುದು ಜನರ ಖಾಸಗೀತನದ, ಜೀವಿಸುವ, ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕನ್ನು ಕಸಿದಂತೆಯೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.


ಮಾತ್ರವಲ್ಲ ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುತ್ತಿರುವ ತಾರತಮ್ಯ ನೀತಿಯ ಪರಮಾವಧಿಯೆಂದು ನ್ಯಾಯಾಲಯಕ್ಕೆ ಅರ್ಜಿಯಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರವು ಕಳೆದ ಮಾರ್ಚ್ ನಲ್ಲಿ ಹರಿದ್ವಾರದಾದ್ಯಂತ ಕಸಾಯಿಖಾನೆಗಳನ್ನು ಮುಚ್ಚಲು ಆದೇಶಿಸಿತ್ತು ಮತ್ತು ಕಸಾಯಿಖಾನೆಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ರದ್ದುಗೊಳಿಸಿತ್ತು.


ಸರ್ಕಾರದ ಈ ರೀತಿಯ ಅಸಹಿಷ್ಣುತೆಯ ನಿಲುವು ನಿರಂಕುಶ ಮತ್ತು ಅಸಾಂವಿಧಾನಿಕವಾಗಿದೆಯೆಂದು ಅರ್ಜಿಯಲ್ಲಿ ನಮೂದಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಸಲ್ಲಿಸಿರುವ ಈ ಅರ್ಜಿಯು ಮೂಲಭೂತ ಹಕ್ಕು ಮತ್ತು ಸಾಂವಿಧಾನಿಕ ಹಕ್ಕನ್ನು ಒಳಗೊಂಡಿದೆಯೆಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಜನರ ಆಹಾರದ ಹಕ್ಕನ್ನು ಬಲವಂತದಿಂದ ತಡೆಯಲು ಸರ್ಕಾರಕ್ಕೆ ಅವಕಾಶವಿಲ್ಲವೆಂದು ನ್ಯಾಯಾಲಯವು ಕಸಾಯಿಖಾನೆ ನಿಷೇಧದ ಕುರಿತು ತನ್ನ ನಿಲುವನ್ನು ಸರ್ಕಾರಕ್ಕೆ ಸ್ಪಷ್ಟಪಡಿಸಿದೆ. ಮಾತ್ರವಲ್ಲ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜುಲೈ 21ರ ಮೊದಲು ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಸಾಧ್ಯವಿಲ್ಲವೆಂದು ತಿಳಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ 23 ಕ್ಕೆ ಮುಂದೂಡಿದೆ.

Join Whatsapp
Exit mobile version