ಲಕ್ನೋ: ಗಾಜಿಯಾಬಾದ್ ನಲ್ಲಿನ ಐವರು ದುಷ್ಕರ್ಮಿಗಳು ದೆಹಲಿಯಿಂದ 36 ವರ್ಷದ ಮಹಿಳೆಯನ್ನು ಅಪಹರಿಸಿ, ಎರಡು ದಿನ ಹಿಂಸಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಹಿಳೆ ಸಾವು ನೋವಿನ ನಡುವೆ ಹೋರಾಡುತ್ತಿದ್ದು, ಆಕೆಯ ದೇಹದಲ್ಲಿ ಒಂದು ಕಬ್ಬಿಣದ ರಾಡ್ ಸಿಲುಕಿಕೊಂಡಿದೆ ಎಂದು ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.
ದಿಲ್ಲಿಯ ಉಪನಗರ ಸಂಪರ್ಕದ ಗಾಜಿಯಾಬಾದ್ ನ ಆಶ್ರಮ ರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದಿರುವುದು ಕಂಡುಬಂತು. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಗುರು ತೇಗ್ ಬಹದೂರ್ ಆಸ್ಪತ್ರೆಗೆ ಸಾಗಿಸಿ, ಆಕೆಯ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ಆ ಐವರು ಕಟುಕರು ಮಹಿಳೆಗೆ ತಿಳಿದವರೇ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಜಿಯಾಬಾದ್ ನಲ್ಲಿನ ಒಂದು ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಮಹಿಳೆಯನ್ನು ಆಕೆಯ ಸಹೋದರನು ಹತ್ತಿರದ ಬಸ್ ನಿಲುಗಡೆ ಬಳಿ ಬಿಟ್ಟಿದ್ದಾನೆ. ಆಕೆ ಬಸ್ಸಿಗೆ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಆ ಐವರು ಆಕೆಯನ್ನು ಕಾರೊಳಕ್ಕೆ ಎಳೆದೊಯ್ದು ಅಪರಿಚಿತ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿ ಸರಣಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಗಳು ಮತ್ತು ಸಂತ್ರಸ್ತೆಯ ನಡುವೆ ಒಂದು ಜಾಗದ ತಕರಾರು ಇದ್ದು, ಅದು ಕೋರ್ಟಿನಲ್ಲಿದೆ. ನಾವು ಸರಿಯಾದ ರೀತಿಯಲ್ಲಿ ಕ್ರಮ ಜರುಗಿಸುತ್ತೇವೆ” ಎಂದು ಗಾಜಿಯಾಬಾದ್ ಸೂಪರಿನ್ ಟೆಂಡೆಂಟ್ ಆಫ್ ಪೊಲೀಸ್ ನಿಪುಣ್ ಅಗರ್ವಾಲ್ ಹೇಳಿದ್ದಾರೆ.
ಮಹಿಳೆ ಸ್ಥಿತಿ ಗಂಭಿರವಿದ್ದರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಟಿಬಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಸಂಪೂರ್ಣ ಮಾಹಿತಿ ನೀಡುವಂತೆ ದಿಲ್ಲಿ ಮಹಿಳಾ ಆಯೋಗವು ಗಾಜಿಯಾಬಾದ್ ಪೊಲೀಸ್ ಸೂಪರಿನ್ ಟೆಂಡೆಂಟರಿಗೆ ನೋಟಿಸ್ ನೀಡಿದೆ.