ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ 46 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಅವರಲ್ಲಿ 19 ಮಂದಿ ಹಾಲಿ ಶಾಸಕರು. ಬಿಜೆಪಿಯು ಅದರ ಬೆನ್ನಿಗೆ 62 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಹೊರಗಿಟ್ಟಿದೆ.
ಮುಖ್ಯಮಂತ್ರಿ ಜೈರಾಂ ಠಾಕೂರ್ ಅವರು ಸೇರಜ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಂಡಿಯಿಂದ ಅನಿಲ್ ಶರ್ಮಾ, ಉನಾದಿಂದ ಸತ್ಪಾಲ್ ಸಿಂಗ್ ಸತ್ತಿ ಸ್ಪರ್ಧಿಸುವರು. ಬುಡಕಟ್ಟು ಮೀಸಲು ಕ್ಷೇತ್ರ ಮೂರು ಇದ್ದರೂ ಎಂಟು ಕಡೆ ಎಸ್ ಟಿಗಳಿಗೆ ಟಿಕೆಟ್ ನೀಡಿದೆ.
ಬಿಜೆಪಿ 5 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ಸ್ಪರ್ಧಿಸುವವರಲ್ಲಿ ಮೂರನೇ ಎರಡು ಪಾಲು ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು. ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಹಾಲಿ 19 ಶಾಸಕರು ಟಿಕೆಟ್ ಪಡೆದಿದ್ದಾರೆ. ಹಾಲಿಗಳಲ್ಲಿ ಕೈ ಬಿಟ್ಟಿರುವ ಒಬ್ಬರೇ ಒಬ್ಬರೆಂದರೆ ಕಿನೌರ್ ನ ಶಾಸಕ ಜಗತ್ ಸಿಂಗ್ ನೇಗಿ. ಆ ಕ್ಷೇತ್ರಕ್ಕೆ ಸದ್ಯ ಬೇರೆಯವರ ಹೆಸರನ್ನೂ ಪ್ರಕಟಿಸಿಲ್ಲ.
2017ರಲ್ಲಿ ಬಂಜಾರ್ ಕ್ಷೇತ್ರದಿಂದ ಆದಿತ್ಯ ವಿಕ್ರಮ ಸಿಂಗ್ ಸ್ಪರ್ಧಿಸಿದ್ದರು. ಈ ಬಾರಿ ಅವರಿಗೆ ಟಿಕೆಟ್ ನೀಡಿಲ್ಲ. ಅದನ್ನು ಪ್ರತಿಭಟಿಸಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಬಂಜಾರ್ ಕ್ಷೇತ್ರಕ್ಕೆ ಈ ಬಾರಿ ಕಿಮಿ ರಾಮ್ ರಿಗೆ ಟಿಕೆಟ್ ನೀಡಲಾಗಿದೆ.
ಸಿಮ್ಲಾದ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಹಿಂದೆ ಸ್ಪರ್ಧಿಸಿದವರಿಗೇ ಟಿಕೆಟ್ ನೀಡಲಾಗಿದೆ. ಅವರಲ್ಲಿ ಮಾಜಿ ಮುಖ್ಯಮಂತ್ರಿ ವಿಕ್ರಮಾದಿತ್ಯ ಸಿಂಗ್ ಅವರ ಮಗ ಮತ್ತು ಬೆಂಬಲಿಗರಿದ್ದಾರೆ. ಹಿಂದಿನ ಏಳು ಜನ ಮಾಜಿ ಕ್ಯಾಬಿನೆಟ್ ಸಚಿವರಿಗೆ ಮತ್ತು ಮೂವರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಶೀಘ್ರವೇ ಇನ್ನುಳಿದ 22 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಹೇಳಿದೆ.
ನವೆಂಬರ್ 12ರಂದು ಹಿಮಾಚಲ ಪ್ರದೇಶದಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆಯು ಡಿಸೆಂಬರ್ 8ರಂದು ನಡೆಯಲಿದೆ. 68 ಕ್ಷೇತ್ರಗಳ ವಿಧಾನ ಸಭಾ ಚುನಾವಣೆಯು ಹಿಂದಿನಂತೆಯೇ ಬಿಜೆಪಿ ಕಾಂಗ್ರೆಸ್ ನಡುವಣ ಹೋರಾಟವಾಗಿದೆ.