ಮುಜಾಫರ್ನಗರ: 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಸಹೋದರನ ಎದುರೇ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಮಕ್ಕಳ ಪೋಷಕರು ಮತ್ತೊಂದು ಹಳ್ಳಿಯಲ್ಲಿನ ತಮ್ಮ ಕುಟುಂಬದ ಕಾರ್ಯಕ್ರಮಕ್ಕಾಗಿ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ನೆರೆ ಮನೆಯ ವ್ಯಕ್ತಿಯೊಬ್ಬ ಮನೆಯೊಳಗೆ ಮಲಗಿದ್ದ ಮಕ್ಕಳನ್ನು ಬಂದೂಕು ತೋರಿಸಿ ಹೆದರಿಸಿದ್ದು, ನಂತರ ತನ್ನ ಮೂವರು ಸ್ನೇಹಿತರನ್ನು ಮನೆಯೊಳಗೆ ಕರೆದಿದ್ದಾನೆ ಎಂದು ಹೇಳಲಾಗಿದೆ.
ಬಾಲಕಿಯ 12 ವರ್ಷದ ಸಹೋದರನಿಗೆ ಬಂದೂಕು ತೋರಿಸಿ, ಬೊಬ್ಬಿಟ್ಟರೆ ಕೊಲ್ಲುವುದಾಗಿ ಬೆದರಿಸಿದ ನಂತರ ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಘಟನೆಯ ವೀಡಿಯೊವನ್ನು ಸಹ ಚಿತ್ರೀಕರಿಸಿದ್ದು, ದೂರು ನೀಡಿದರೆ ಅದನ್ನು ವೈರಲ್ ಮಾಡುತ್ತೇವೆ ಎಂದು ಸಂತ್ರಸ್ಥ ಬಾಲಕಿಗೆ ಬೆದರಿಕೆ ಕೂಡಾ ಹಾಕಿದ್ದಾರೆ.
ಬಾಲಕಿಯ ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.
ಸಾಮೂಹಿಕ ಅತ್ಯಾಚಾರ, ಮನೆ ಅತಿಕ್ರಮಣ, ಕೊಲೆ ಬೆದರಿಕೆ ಮತ್ತು ಪೊಕ್ಸೊ ಕಾಯ್ದೆಯಡಿ ಬಂಧಿತ ಮೂವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.