ಉತ್ತರ ಪ್ರದೇಶ: ಫೆಲೆಸ್ತೀನ್ ಧ್ವಜ ಹಾರಿಸಿದ ವಿದ್ಯುತ್ ಇಲಾಖೆಯ ಉದ್ಯೋಗಿ ವಜಾ

- Advertisement -

ಸಹರಾನ್‌ ಪುರ: ಉತ್ತರ ಪ್ರದೇಶದ ಸಹರಾನ್‌ ಪುರ ಜಿಲ್ಲೆಯಲ್ಲಿ ಈದ್ ಹಬ್ಬದಂದು ಫೆಲೆಸ್ತೀನ್ ಧ್ವಜ ಹಾರಿಸಿದ ಆರೋಪದ ಮೇಲೆ ವಿದ್ಯುತ್ ಇಲಾಖೆಯ ಗುತ್ತಿಗೆ ಕಾರ್ಮಿಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಫೆಲೆಸ್ತೀನ್ ಧ್ವಜ ಹಿಡಿದಿರುವ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಉದ್ಯೋಗಿಗೆ ವಜಾಗೊಳಿಸುವ ನೋಟಿಸ್ ನೀಡಲಾಗಿದೆ.

ಕೈಲಾಶ್‌ ಪುರ ಪವರ್ ಹೌಸ್‌ ನಲ್ಲಿ ಕೆಲಸ ಮಾಡುತ್ತಿದ್ದ ಸಾಕಿಬ್ ಖಾನ್, ಮಾರ್ಚ್ 31 ರಂದು ಈದ್ ‘ನಮಾಜ್’ ನಂತರ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಇಲಾಖೆಯು ಈ ಕ್ರಮವನ್ನು “ರಾಷ್ಟ್ರವಿರೋಧಿ” ಎಂದು ಪರಿಗಣಿಸಿದೆ. ಹೀಗಾಗಿ ಉದ್ಯೋಗಿಯನ್ನು ವಜಾಗೊಳಿಸಲಾಗಿದೆ ಎಂದು ವಿದ್ಯುತ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ್ ಕುಮಾರ್ ತಿಳಿಸಿದ್ದಾರೆ.

“ಕೈಲಾಶ್‌ ಪುರ ಪವರ್ ಹೌಸ್‌ ನಲ್ಲಿ ಗುತ್ತಿಗೆ ಕೆಲಸಗಾರನಾಗಿದ್ದ ಸಾಕಿಬ್ ಖಾನ್, ಈದ್ ಹಬ್ಬದಂದು ‘ನಮಾಜ್’ ಮಾಡಿದ ನಂತರ ಫೆಲೆಸ್ತೀನ್ ಧ್ವಜ ಹಿಡಿದು, ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು” ಎಂದು ಕುಮಾರ್ ಹೇಳಿದ್ದಾರೆ.

“ಈ ವಿಚಾರ ಇಲಾಖೆಯ ಗಮನಕ್ಕೆ ಬಂದಾಗ, ಅದನ್ನು ದೇಶ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಯಿತು. ಸಂಬಂಧಪಟ್ಟ ಗುತ್ತಿಗೆ ಕಂಪನಿಗೆ ಪತ್ರ ಬರೆದು, ಖಾನ್ ಅವರನ್ನು ಸೇವೆಯಿಂದ ತೆಗೆದುಹಾಕುವಂತೆ ಸೂಚಿಸಲಾಯಿತು” ಎಂದು ಅವರು ತಿಳಿಸಿದ್ದಾರೆ.

- Advertisement -


Must Read

Related Articles