Home ಟಾಪ್ ಸುದ್ದಿಗಳು ‘ಎಕ್ಸಿಟ್ ಪೋಲ್’ಮೇಲೆ ನಿಷೇಧ ಹೇರಿದ ಉತ್ತರಪ್ರದೇಶ ಚುನಾವಣಾ ಆಯೋಗ

‘ಎಕ್ಸಿಟ್ ಪೋಲ್’ಮೇಲೆ ನಿಷೇಧ ಹೇರಿದ ಉತ್ತರಪ್ರದೇಶ ಚುನಾವಣಾ ಆಯೋಗ

ಲಕ್ನೋ: ತೀವ್ರ ಕುತೂಹಲ ಕೆರಳಿಸಿರುವ ಉತ್ತರಪ್ರದೇಶದ ಚುನಾವಣೆಯಲ್ಲಿ ‘ಎಕ್ಸಿಟ್ ಪೋಲ್’ಗಳನ್ನು ನಿಷೇಧಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ನಡೆಯುವ ಫೆಬ್ರವರಿ 10ರಿಂದ ಮಾರ್ಚ್ 7ರವರೆಗೆ ರಾಜ್ಯದಲ್ಲಿ ಯಾವುದೇ ಎಕ್ಸಿಟ್ ಪೋಲ್ ಪ್ರಸಾರ ಮಾಡುವಂತಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಅಜಯ್ ಕುಮಾರ್ ಶುಕ್ಲಾ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಫೆಬ್ರವರಿ 10 ರಿಂದ ಮಾರ್ಚ್‌ 7ರ ರವರೆಗಿನ ಅವಧಿಯಲ್ಲಿ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಯಾವುದೇ ವೆಬ್ಸೈಟ್’ಗಳಲ್ಲಿ ಎಕ್ಸಿಟ್ ಪೋಲ್‌ಗಳನ್ನು ಪ್ರಸಾರ ಮಾಡುವಂತಿಲ್ಲ. ಈ ನಿಯಮವನ್ನು ಪಾಲಿಸದಿರುವವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯ ಜೊತೆಗೆ ಭಾರಿ ದಂಡ ಕೂಡ ತೆರಬೇಕಾಗುತ್ತದೆ ಎಂದು ಅಜಯ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ರಾಜಕೀಯವಾಗಿ ಸಾಕಷ್ಟು ಮಹತ್ವ ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 10ರಂದು ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಭಿಪ್ರಾಯ ಸಂಗ್ರಹಗಳನ್ನು ನಿಲ್ಲಿಸುವಂತೆ ಸಮಾಜವಾದಿ ಪಕ್ಷ (SP) ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಎಸ್‌ಪಿ ಅಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಅವರು ಜನವರಿ 23 ರಂದು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ವಿವಿಧ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಭಿಪ್ರಾಯ ಸಂಗ್ರಹಗಳ ಪ್ರಸಾರವನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸಿದ್ದರು.

Join Whatsapp
Exit mobile version