ಕಾನ್ಪುರ: ಛಾಯಾಗ್ರಾಹಕ ಇಲ್ಲವೆಂದು ವಧುವೊಬ್ಬರು ಮದುವೆಯನ್ನು ನಿರಾಕರಿಸಿ ವೇದಿಕೆಯಿಂದ ಇಳಿದು ನೆರೆಯ ಮನೆಗೆ ತೆರಳಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹತ್ ನ ಮಂಗಲ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ.
ರೈತ ತನ್ನ ಮಗಳ ಮದುವೆಯನ್ನು ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ನಿಶ್ಚಯಿಸಿದ್ದರು. ಮದುವೆ ಸಕಲ ಸಿದ್ದತೆಯಾಗಿತ್ತು. ವಧು ವರನಿಗಾಗಿ ಕಾಯುತ್ತಾ ವೇದಿಕೆ ಮೇಲೆ ನಿಂತಿದ್ದಾಳೆ. ಅದ್ಧೂರಿ ಮೆರವಣಿಗೆ ಮೂಲಕ ವರ ಮದುವೆ ಮನೆಗೆ ಬಂದಿದ್ದಾನೆ. ನೇರವಾಗಿ ವೇದಿಕೆ ಮೇಲೆ ಹೋಗಿ ವಧು ಪಕ್ಕದಲ್ಲಿ ನಿಂತುಕೊಂಡಿದ್ದಾನೆ. ಪುರೋಹಿತರು ಮಂತ್ರ ಹೇಳಿದ್ದು, ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರದಲ್ಲಿ ವಧು ತಡೆದಿದ್ದಾಳೆ.
ಕಾರಣ ಮದುವೆ ಕ್ಷಣಗಳನ್ನು ಮತ್ತು ಹಾರ ಬದಲಾಯಿಸಿಕೊಳ್ಳುವ ಕ್ಷಣಗಳನ್ನು ಸೆರೆ ಹಿಡಿಯಲು ಛಾಯಾಗ್ರಾಹಕ (ಫೋಟೋಗ್ರಾಫರ್) ಇಲ್ಲವೆಂದು ವಧು ತಗಾದೆ ತೆಗೆದು ತನಗೆ ಈ ಮದುವೆ ಬೇಡವೆಂದು ವೇದಿಕೆಯಿಂದ ಇಳಿದು ನೆರೆಯ ಮನೆಗೆ ತೆರಳಿದಳು. ಇದನ್ನು ಕಂಡ ಸಂಬಂಧಿಕರು ಮತ್ತು ನೆರೆದ ಜನರು ಆಕೆಯ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಆಕೆ ಒಪ್ಪಿಕೊಳ್ಳಲಿಲ್ಲ. ಬದಲಿಗೆ ‘”ಇಂದು ನಮ್ಮ ಮದುವೆಯ ಬಗ್ಗೆ ಕಾಳಜಿ ವಹಿಸದ ವ್ಯಕ್ತಿ ಮುಂದೆ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ?” ಎಂದು ಕಿಡಿಕಾರಿದ್ದಾಳೆ.
ಕೊನೆಗೆ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿನಿಮಯ ಮಾಡಿಕೊಂಡ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.