Home ಟಾಪ್ ಸುದ್ದಿಗಳು ಕೆಎಇ ಪರೀಕ್ಷೆಗಳಲ್ಲಿ ಬ್ಲೂಟೂಥ್ ಬಳಕೆ: ಉನ್ನತ ತನಿಖೆಗೆ ಸಿದ್ಧ: ಪ್ರಿಯಾಂಕ್ ಖರ್ಗೆ

ಕೆಎಇ ಪರೀಕ್ಷೆಗಳಲ್ಲಿ ಬ್ಲೂಟೂಥ್ ಬಳಕೆ: ಉನ್ನತ ತನಿಖೆಗೆ ಸಿದ್ಧ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಇತ್ತೀಚಿಗೆ ಕರ್ನಾಟಕ‌ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಬ್ಲೂಟೂಥ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅವಶ್ಯವೆನಿಸಿದರೆ ಉನ್ನತಮಟ್ಟದ ತನಿಖೆ ನಡೆಸಲೂ ಸರ್ಕಾರ ಸಿದ್ಧ ಎಂದು ಹೇಳಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಸೂಕ್ತ ಕ್ರಮಕೈಗೊಳ್ಳಲಾಗಿತ್ತು.‌ ಹ್ಯಾಂಡ್ ಹೆಲ್ಡ್ ಡಿಟೆಕ್ಟರ್ ಹಾಗೂ ಮೆಟಲ್ ಡಿಟೆಕ್ಟರ್ ಬಳಸಲಾಗಿತ್ತು. ಆದರೂ ಕೆಲವು ಅಭ್ಯರ್ಥಿಗಳು ಶರ್ಟ್ ಗಳಲ್ಲಿ ಡಿವೈಸ್ ಇಟ್ಟುಕೊಂಡು ಪರೀಕ್ಷಾ ಕೇಂದ್ರಗಳಿಗೆ ಹೋಗಿದ್ದಾರೆ. ಈ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ತಪ್ಪಿತಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಬ್ಲೂಟೂಥ್ ಬಳಸಿ ಪರೀಕ್ಷೆಗಳಲ್ಲಿ ಉತ್ತರ ಬರೆಯುತ್ತಿದ್ದವನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ತಕ್ಷಣ ಅಗತ್ಯ ಕ್ರಮ ವಹಿಸಿದ್ದರಿಂದ ಪ್ರಕರಣ ಕೂಡಲೇ ಬೆಳಕಿಗೆ ಬಂದಿದೆ ಎಂದು ಸಚಿವರು ಹೇಳಿದ್ದಾರೆ.

ಅಕ್ರಮದಲ್ಲಿ ಹಿರಿಯ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅಂತಹವರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಒತ್ತಾಯಿಸುತ್ತಿರುವ ಕುರಿತು ಉತ್ತರಿಸಿದ ಸಚಿವರು, ಪ್ರಕರಣದ ತನಿಖೆಯನ್ನು ಪೊಲೀಸರು ಸಮಗ್ರವಾಗಿ ಕೈಗೊಳ್ಳುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಶ್ರಮಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಉನ್ನತ ಮಟ್ಟದ ತನಿಖೆಗೂ ಸಿದ್ಧರಿದ್ದೇವೆ ಎಂದರು. ಆದರೆ ಸಿಬಿಐಗೆ ವಹಿಸಲ್ಲ ಎಂದು ಸ್ಪಷ್ಟಪಡಿಸಿದ ಪ್ರಿಯಾಂಕ ಖರ್ಗೆ, ಪಿಎಸ್ ಐ ಹಗರಣವನ್ನು ಬಿಜೆಪಿ ಯಾಕೆ ಸಿಬಿಐಗೆ ವಹಿಸಿರಲಿಲ್ಲ ಎಂದು ಮರು ಪ್ರಶ್ನೆ ಹಾಕಿದರು‌.

ರಾಜ್ಯ ಭೀಕರ ಬರಗಾಲಕ್ಕೆ ತುತ್ತಾಗಿದೆ. ಬರ ಪರಿಹಾರಕ್ಕೆ ಸುಮಾರು 17,000 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಕೃಷಿ‌ ಇಲಾಖೆ ಕಾರ್ಯದರ್ಶಿಗಳನ್ನು ದೆಹಲಿಯಲ್ಲಿ ಭೇಟಿ ಮಾಡಿ ಬಂದಿದ್ದೇವೆ.‌ ಈಗಿರುವ ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಪರಿಹಾರ ಬಿಡುಗಡೆ ಮಾಡಿದರೆ ಹೆಚ್ಚಿನ ಪರಿಹಾರ ಲಭಿಸುವುದಿಲ್ಲ. ಎನ್ ಡಿ‌ ಆರ್ ಎಫ್ ನಿಯಮಾವಳಿಗಳಿಗೆ ಅಗತ್ಯ ಬದಲಾವಣೆ ತರುವಂತೆ ಒತ್ತಾಯಿಸಿ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೂ ರಾಜ್ಯ ಸರ್ಕಾರ ಎಸ್ ಢಿ ಆರ್ ಎಫ್ ನಿಯಮದ ಪ್ರಕಾರ ಬರ ಪರಿಹಾರ ಬಿಡುಗಡೆ ಮಾಡಲಿದೆ ಎಂದರು.

ನರೇಗಾ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಬರಬೇಕಾದ ಕೂಲಿ ರೂ 700 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಅಲ್ಲದೆ, ಈಗಿರುವ 100 ದಿನಗಳ ಮಾನವ ದಿನಗಳನ್ನು 150 ಕ್ಕೇರಿಸಲು ಬೇಡಿಕೆ ಇದೆ. ಇದನ್ನು ಕೇಂದ್ರ ಸರ್ಕಾರವೇ ಮಾಡಬೇಕು. ರಾಜ್ಯದ ವಾರ್ಷಿಕ ಮಿತಿ 13 ಕೋಟಿ ರೂ. ಮಾನವ ದಿನಗಳಿದ್ದು, ಈಗಾಗಲೇ 10 ಕೋಟಿ ಮಾನವ ದಿನ ಸೃಜನೆಯಾಗಿದೆ. ಬರಗಾಲವಿರುವುದರಿಂದ 13 ಕೋಟಿಗೆ ಬದಲು 18 ಕೋಟಿ ಮಾನವ ದಿನ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬದಲಿಗೆ, ವಾರ್ಷಿಕ ರೂ 75,000 ಕೋಟಿ ಬಜೆಟ್ ಬದಲಿಗೆ ರೂ 60,000 ಕೋಟಿಗೆ ಇಳಿಸಲಾಗಿದೆ.‌ ಹೀಗಾದರೆ ಬಡವರು ಹೇಗೆ ಬದುಕಬೇಕು ಎಂದು ಸಚಿವರು ಅಸಮಾಧಾನ‌ ವ್ಯಕ್ತಪಡಿಸಿದರು.

ನಗರದಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಯ ಗುತ್ತಿಗೆಯನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದ್ದು, ಕಂಪನಿ ಕಳಪೆ ಗುಣಮಟ್ಟದ ಪೈಪ್ ಗಳನ್ನು ಬಳಸುತ್ತಿದೆ ಎಂದು ಪತ್ರಕರ್ತರು ಗಮನ ಸೆಳೆದಾಗ ಸೆಪೆಟ್ ಅನುಮೋದಿತ ಪೈಪ್ ಗಳನ್ನು ಬಳಕೆ ಮಾಡಲು ಸೂಚಿಸಲಾಗಿದೆ.ಅವಶ್ಯವೆನಿಸಿದರೆ ಥರ್ಡ್ ಪಾರ್ಟಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಈ ಹಿಂದಿನ ಸರ್ಕಾರ ವಿದ್ಯುತ್ ಉತ್ಪಾದನೆಗೆ ಒತ್ತುಕೊಡದೆ ಇರುವುದರಿಂದ ಈಗ ಬೇಡಿಕೆ ಹೆಚ್ಚಾಗಿದೆ ಎಂದ ಖರ್ಗೆ, ಹಉತ್ತರಪ್ರದೇಶ ಹಾಗೂ ಪಂಜಾಬ್ ನಿಂದ ವಿದ್ಯುತ್ ಖರೀದಿ ಹಾಗೂ ಛತ್ತಿಸ್ ಗಡ್ ನಿಂದ ಕಲ್ಲಿದ್ದಲು ಖರೀದಿ ಮಾಡಲು ಸರ್ಕಾರ ಮುಂದಾಗಿದೆ ಎಂದರು.

ಮಹಾರಾಷ್ಟ್ರ ದಿಂದ ಭೀಮಾ ನದಿಗೆ ನೀರು ಬಿಡಲು ಕ್ರಮಕೈಗೊಳ್ಳಬೇಕು ಎಂದು ಶಾಸಕ ಎಂ ವೈ ಪಾಟೀಲ ಅವರು ಹೇಳಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಅಂತಾರಾಜ್ಯ ವಿಷಯವಾದ್ದರಿಂದ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಡಿ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವ ಖರ್ಗೆ, ನಮ್ಮ ಆದ್ಯತೆ ಇಂತಹದ್ದಲ್ಲ. ನಮ್ಮ ಆದ್ಯತೆ ಐದು ಗ್ಯಾರಂಟಿಗಳನ್ನು ಸಮಗ್ರವಾಗಿ ಜಾರಿಗೆ ತರುವುದು ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವುದು ಆಗಿದೆ ಎಂದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ತಿಪ್ಪಣ್ಣಪ್ಪ ಕಮಕನೂರು ಇದ್ದರು.

Join Whatsapp
Exit mobile version