►ನಾವು ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ಕೆಲಸ ಮಾಡುತ್ತಿದ್ದೇವೆ: ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾದ ಬಳಿಕ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ರಂಝಾನ್ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟ ಆಯೋಜಿಸಿದ್ದಾರೆ.
ಶ್ವೇತಭವನದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಟ್ರಂಪ್, ಇಸ್ಲಾಂ ಧರ್ಮದ ಪವಿತ್ರ ತಿಂಗಳು ರಂಝಾನ್ ಅನ್ನು ಆಚರಿಸುತ್ತಾ ಬಂದಿದ್ದೇವೆ. ಇದು ವಿಶ್ವದಾದ್ಯಂತ ಮುಸ್ಲಿಂ ಬಾಂಧವರಿಗೆ ಪುಣ್ಯ ಸಂಪಾದಿಸುವ ಮಾಸವಾಗಿದೆ. ಅದಕ್ಕಾಗಿ ವಿಶ್ವದ ಅತ್ಯುತ್ತಮ ಧರ್ಮಗಳಲ್ಲಿ ಒಂದಾಗಿರುವ ಮುಸ್ಲಿಂ ಧರ್ಮವನ್ನು ಗೌರವಿಸುತ್ತೇವೆ ಎಂದರಲ್ಲದೇ ಮುಸ್ಲಿಮರಿಗೆ ರಂಝಾನ್ ಪ್ರಯುಕ್ತ ಶುಭ ಕೋರಿದ್ದಾರೆ.
ಇಫ್ತಾರ್ ಸಮಯದಲ್ಲಿ, ಟ್ರಂಪ್ ರಂಝಾನ್ ಸಾರವನ್ನು ಪ್ರತಿಬಿಂಬಿಸಿದರು, ಪವಿತ್ರ ತಿಂಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುವ ಮುಸ್ಲಿಮರ ಸಮರ್ಪಣೆಯನ್ನು ಉಲ್ಲೇಖಿಸಿದರು. “ಪವಿತ್ರ ತಿಂಗಳಲ್ಲಿ ಪ್ರತಿದಿನ, ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ, ಪ್ರಾರ್ಥನೆ ಮತ್ತು ದೇವರ ಮೇಲಿನ ಭಕ್ತಿಯ ಮೇಲೆ ತಮ್ಮ ಗಮನವನ್ನು ಆಳಗೊಳಿಸುತ್ತಾರೆ. ನಂತರ ಪ್ರಪಂಚದಾದ್ಯಂತದ ಮುಸ್ಲಿಮರು ಪ್ರತಿ ರಾತ್ರಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಸರ್ವಶಕ್ತನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ, ಇಫ್ತಾರ್ ಭೋಜನದೊಂದಿಗೆ ತಮ್ಮ ಉಪವಾಸವನ್ನು ಮುರಿಯುತ್ತಾರೆ. ನಾವೆಲ್ಲರೂ ಇಡೀ ಜಗತ್ತಿಗೆ ಶಾಂತಿಯನ್ನು ಹುಡುಕುತ್ತಿದ್ದೇವೆ” ಎಂದು ಅವರು ಹೇಳಿದರು.
ಯುಎಸ್, ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಮಾರ್ಚ್ ನಲ್ಲಿ ಕೊನೆಗೊಂಡ ನಂತರ ಪುನರಾರಂಭಗೊಂಡ ಇಸ್ರೇಲ್ ಮತ್ತು ಗಾಝಾ ನಡುವಿನ ಸಂಘರ್ಷವನ್ನು ಉಲ್ಲೇಖಿಸಿ “ನಾವು ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಟ್ರಂಪ್ ಒತ್ತಿ ಹೇಳಿದರು.
1996 ರಲ್ಲಿ ಅಂದಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಅಧಿಕಾರಾವಧಿಯಲ್ಲಿ, ಶ್ವೇತಭವನದಲ್ಲಿ ಇಫ್ತಾರ್ ಕೂಟ ಪ್ರಾರಂಭಿಸಲಾಯಿತು, ಇದನ್ನು ನಂತರದ ಅಧ್ಯಕ್ಷರಾದ ಜಾರ್ಜ್ ಬುಷ್ ಮತ್ತು ಬರಾಕ್ ಒಬಾಮಾ ಕೂಡ ಮುಂದುವರಿಸಿದ್ದರು. ಈ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಸಮುದಾಯದ ಗಣ್ಯರು ಹಾಗೂ ಮುಸ್ಲಿಂ ರಾಷ್ಟ್ರಗಳ ರಾಜತಾಂತ್ರಿಕರು ಮತ್ತು ಸೆನೆಟರ್‌ಗಳು ಭಾಗವಹಿಸುವುದು ಪದ್ಧತಿ. ಆದ್ರೆ ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ 2017ರಲ್ಲಿ ಶ್ವೇತಭವನದ ಇಫ್ತಾರ್ ಕೂಟವನ್ನು ರದ್ದುಗೊಳಿಸಿದ್ದರು. ಇದೀಗ ಮತ್ತೆ ಆಯೋಜಿಸಿದ್ದಾರೆ.