ಮೈಸೂರು; ಉರಿಗೌಡ, ನಂಜೇಗೌಡ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ತಿಕ್ಕಾಟ ಮುಂದುವರಿದಿದ್ದು, ಇದೀಗ ಈ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ವಾಗ್ದಾಳಿ ನಡೆಸಿದ್ದಾರೆ.
ಉರೀಗೌಡ-ನಂಜೇಗೌಡ ಕರ್ನಾಟಕದವರಲ್ಲ, ತಮಿಳುನಾಡು ಮೂಲದವರು. ಅವರ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಬಡವರ ಕಷ್ಟ ಗೊತ್ತಿಲ್ವಾ? ಸಿಲಿಂಡರ್ ಬೆಲೆ ದುಬಾರಿಯಾಗಿದ್ರೂ ಶೋಭಾ ಕರಂದ್ಲಾಜೆ ಮಾತನಾಡುತ್ತಿಲ್ಲ.
ಒಂದು ಹೆಣ್ಣಾಗಿ ಮಹಿಳೆಯರ ಕಷ್ಟ ಅವರಿಗೆ ಗೊತ್ತಿಲ್ಲ ಅಂದರೆ ಹೇಗೆ ಅವರಿಗೆ ನಾಚಿಕೆಯಾಗಲ್ವಾ ಎಂದು ಪುಷ್ಪ ಅಮರನಾಥ್ ಕಿಡಿಕಾರಿದರು ಅಲ್ಲದೇ ಈ ಬಾರಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಕೇಂದ್ರಕ್ಕೆ ಬಡವರ ಕಾಳಜಿ ಇಲ್ಲ ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು , ಪ್ರಧಾನಿ ಮೋದಿ ಟೊಳ್ಳು ಭರವಸೆ ಕೊಟ್ಟು ರಾಜ್ಯ ಪ್ರವಾಸ ಮಾಡ್ತಿದ್ದಾರೆ. ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ ನೆಲಕಚ್ಚಲಿದೆ. ಕಾಂಗ್ರೆಸ್ಸಿಗೆ ಜನರು ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದರು.
ಕಾಂಗ್ರೆಸ್ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು. ಪಕ್ಷಾತೀತವಾಗಿ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು. ಸಿದ್ದರಾಮಯ್ಯ ಸರ್ಕಾರದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಿತ್ತು. ಅದೇ ರೀತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಲ್ಲಾ ಭರವಸೆ ಈಡೇರಿಸಲಿದೆ ಎಂದು ಹೇಳಿದರು.