ಈರೋಡ್: ಸರಕು ಸಾಗಣೆ ವಾಹನದ ಚಾಲಕನೋರ್ವನಿಗೆ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸಿದ ಕಾರಣಕ್ಕೆ ಬೇಸತ್ತ ಚಾಲಕ ತನ್ನ ವಾಹನಕ್ಕೆ ಬೆಂಕಿ ಹಚ್ಚಿ, ಬಳಿಕ ಪೆಟ್ರೋಲ್ ಸುರಿದುಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯ ಕೊಂಡಂಪಟ್ಟಿ ಎಂಬಲ್ಲಿ ನಡೆದಿದೆ.
ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದ ಮಿನಿ ಟ್ರಕ್ ಚಾಲಕ ಸಂತೋಷ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಕೊಂಡಂಪಟ್ಟಿ ವೃತ್ತದಲ್ಲಿ ಶನಿವಾರ ರಾತ್ರಿ ವಾಹನ ತಪಾಸಣೆಸುತ್ತಿದ್ದ ಪೊಲೀಸರು, ಸಂತೋಷ್ ಚಲಾಯಿಸುತ್ತಿದ್ದ ವಾಹನವನ್ನು ತಡೆದಿದ್ದರು. ಬಳಿಕ ಸಂತೋಷ್ ವಿರುದ್ಧ ಕುಡಿದು ವಾಹನ ಚಲಾಯಿಸಿದ ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಪಡಿಸಿಕೊಂಡಿದ್ದರು. ಇದಲ್ಲದೆ 10 ಸಾವಿರ ನೀಡುವಂತೆ ಸಂತೋಷ್ ಬಳಿ ಬೇಡಿಕೆ ಇಟ್ಟಿದ್ದರು ಎಂದು ಸಂತೋಷ್ ಸಂಬಂಧಿಕರು ಆರೋಪಿಸಿದ್ದಾರೆ. ಪೊಲೀಸರ ನಡೆಯಿಂದ ಅಸಮಾಧಾನಗೊಂಡ ಸಂತೋಷ್, ಸಮೀಪದ ಬಂಕ್‌ನಿಂದ ಪೆಟ್ರೋಲ್ ಖರೀದಿಸಿ ವಾಹನಕ್ಕೆ ಬೆಂಕಿ ಹಚ್ಚಿದ ಬಳಿಕ ತನ್ನ ಮೇಲೆಯೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಇದರಿಂದ ಗಾಬರಿಗೊಂಡ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಬೆಂಕಿ ನಂದಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮೀಪದ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.