ಹೊಸದಿಲ್ಲಿ: ಲಕ್ನೋದ ಸಲಿಂಪುರದ ಪಿಟೋರಾದಲ್ಲಿ ಹಿಂದೂ ಯುವತಿಯೊಬ್ಬಳು ತನ್ನ ಕೆಲಸಗಾರನೊಂದಿಗೆ ಓಡಿಹೋದ ನಂತರ ಪೊಲೀಸರು ನನ್ನನ್ನು ಥಳಿಸಿ, ಎಂಜಲನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ ಎಂದು ಮುಸ್ಲಿಮ್ ವೆಲ್ಡರ್ ಫಕ್ರುದ್ದೀನ್ ಅಹ್ಮದ್ ಅಲಿ ಅಹ್ಮದ್ ಆರೋಪಿಸಿದ್ದಾರೆ.
ವೆಲ್ಡಿಂಗ್ ಅಂಗಡಿಯೊಂದನ್ನು ಹೊಂದಿರುವ ಫಕ್ರುದ್ದೀನ್ ಅಹ್ಮದ್ ಕ್ಲಾರಿಯನ್ ಇಂಡಿಯಾದೊಂದಿಗೆ ಮಾತನಾಡುತ್ತಾ, “ನನ್ನ ನೆರೆಹೊರೆಯ ವ್ಯಕ್ತಿ ಚೋತು ಕಶಾಪ್ ಎಂಬಾತನ ಮಗಳು ನನ್ನ ಅಂಗಡಿಯಲ್ಲಿ ಕೆಲಸಕ್ಕಿದ್ದ ಝುಬೈರ್ ಜೊತೆಗೆ ಓಡಿಹೋದ ಕುರಿತು ದೂರು ನೀಡಿದ ನಂತರ ಪೊಲೀಸರು ನನ್ನನ್ನು ಪೊಲೀಸ್ ಠಾಣೆಗೆ ಕರೆದು ಚಿತ್ರಹಿಂಸೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ಅವರು ನನಗೆ ತುಂಬಾ ಹಿಂಸೆ ನೀಡಿದ್ದಾರೆ. ಮಾತ್ರವಲ್ಲದೆ, ಅವರು ನನ್ನಿಂದ ಹಣವನ್ನು ಸುಲಿಗೆ ಮಾಡಿದ್ದಾರೆ. ಶೂಗಳ ಮೇಲೆ ಉಗುಳಿ ಅದನ್ನು ನೆಕ್ಕುವಂತೆ ಒತ್ತಾಯಿಸಿದ್ದಾರೆ. ನನ್ನ ಗಡ್ಡವನ್ನು ಎಳೆದು ಬಗ್ಗಿಸಿ, ಮೊಣಕೈಯಿಂದ ನನ್ನ ಬೆನ್ನಿಗೆ ಹೊಡೆದಿದ್ದಾರೆ. ಅವರು ನನ್ನೊಂದಿಗೆ ಸಾಕಷ್ಟು ಕೆಟ್ಟದಾಗಿ ವರ್ತಿಸಿದ್ದಾರೆ. ನಾನು ಏನು ಅಪರಾಧ ಮಾಡಿದ್ದೇನೆ ಎಂದು ಕೇಳಲು ನಾನು ಅವರ ಕಾಲಿಗೆ ಬಿದ್ದೆ” ಎಂದು ಅವರು ಆರೋಪಿಸಿದ್ದಾರೆ.
ಅವರು ತನ್ನನ್ನು ಅವಾಚ್ಯ ಪದಗಳನ್ನು ಬಳಸುವ ಮೂಲಕ ನಿಂದಿಸಿದ್ದಾರೆ. ಮಾತ್ರವಲ್ಲದೆ, ಬಲವಂತವಾಗಿ ವೈನ್ ಕುಡಿಯಲು ಮತ್ತು ಬಾಟಲಿಯ ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಅವರು ನನ್ನಿಂದ 79,000 ರೂ. ಹಣವನ್ನು ಸುಲಿಗೆ ಮಾಡಿದ್ದು, ಅದನ್ನು ನೇರವಾಗಿ ಹಣವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ ಮೂರನೇ ವ್ಯಕ್ತಿ ರಾಜು ಎಂಬಾತನ ಮೂಲಕ ಹಣವನ್ನು ಸ್ವೀಕರಿಸಿದ್ದಾರೆ ಎಂದು ಅಹ್ಮದ್ ಆರೋಪಿಸಿದ್ದಾರೆ.
ಇವೆಲ್ಲದ್ದರಿಂದ ಅವರು ತೀವ್ರ ನೊಂದಿದ್ದು, ಅಂಗಡಿಯನ್ನು ಮುಚ್ಚಿದ್ದಾರೆ. ಫಕ್ರುದ್ದೀನ್ ಅವರ ಪ್ರಕಾರ, ಪೊಲೀಸರ ಚಿತ್ರಹಿಂಸೆ ಒಂದು ತಿಂಗಳಿಗೂ ಹೆಚ್ಚು ಕಾಲ ನಿರಂತರವಾಗಿ ಮುಂದುವರೆದಿದೆ. ಫಕ್ರುದ್ದೀನ್ ಅವರು ಮಸೀದಿಯಲ್ಲಿ ಅಳುತ್ತಿರುವುದನ್ನು ನೋಡಿದ ಓರ್ವ ವಕೀಲರು ಅವರ ರಕ್ಷಣೆಗೆ ಬಂದಿದ್ದಾರೆ.
ಪತ್ರಕರ್ತ ಉರೂಜ್ ಖಾನ್ ರವರು ಖಾನ್ ರವರ ವೀಡಿಯೋವನ್ನು ಪೋಸ್ಟ್ ಮಾಡಿದ ನಂತರ ಅಹ್ಮದ್ ಅವರ ಮೇಲಿನ ಪೊಲೀಸ್ ದೌರ್ಜನ್ಯ ಬೆಳಕಿಗೆ ಬಂದಿದೆ. ಅವರು ವೀಡಿಯೋದಲ್ಲಿ ಪೊಲೀಸ್ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ.