ಲಕ್ನೋ: ಉತ್ತರ ಪ್ರದೇಶ ಸರ್ಕಾರ ಕೊನೆಗೂ ಪ್ರತಿಭಟನೆಗೆ ಮಣಿದಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ಮೂವರಿಗೆ ಲಖಿಂಪುರ ಖೇರಿ ಮತ್ತು ಸೀತಾಪುರ ಜಿಲ್ಲೆಗಳಿಗೆ ಭೇಟಿ ನೀಡಲು ಅವಕಾಶ ನೀಡಿದೆ. ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಖಿಂಪುರದಲ್ಲಿ ವಾಹನ ಹರಿಸಿದ ಪರಿಣಾಮ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು.
ರಾಹುಲ್ ಗಾಂಧಿ, ಛತ್ತೀಸ್ ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ಲಕ್ನೋ ತೆರಳಲು ವಿಮಾನ ಹತ್ತುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ತನ್ನ ನಿಲುವು ಬದಲಿಸಿದೆ. ರಾಹುಲ್ ಗಾಂಧಿಗೆ ಈ ಹಿಂದೆ ಲಖಿಂಪುರಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಲಾಗಿತ್ತು ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೋಮವಾರದಿಂದ ಬಂಧನದಲ್ಲಿಡಲಾಗಿತ್ತು.
ಈ ನಿಯೋಗ ಲಖಿಂಪುರಕ್ಕೆ ಭೇಟಿ ನೀಡಿ ಹತ್ಯೆಯಾದ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲಿದೆ.