Home ಟಾಪ್ ಸುದ್ದಿಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸಿ ದೇಶ ಹಾಗೂ ರಾಜ್ಯವನ್ನು ಒಂದುಗೂಡಿಸಲು ಐಕ್ಯತಾ ಯಾತ್ರೆ: ಡಿ.ಕೆ. ಶಿವಕುಮಾರ್

ಸಮಾಜದಲ್ಲಿ ಸಾಮರಸ್ಯ ಮೂಡಿಸಿ ದೇಶ ಹಾಗೂ ರಾಜ್ಯವನ್ನು ಒಂದುಗೂಡಿಸಲು ಐಕ್ಯತಾ ಯಾತ್ರೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಸಮಾಜದಲ್ಲಿ ಸಾಮರಸ್ಯ ಮೂಡಿಸಿ ದೇಶ ಹಾಗೂ ರಾಜ್ಯವನ್ನು ಒಂದುಗೂಡಿಸಲು ಐಕ್ಯತಾ ಯಾತ್ರೆಯನ್ನು ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಹುಲ್ ಗಾಂಧಿಯವರು ಐದು ಪ್ರಮುಖ ವಿಚಾರವಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಆದರೆ ಈಗ ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಸಮಾಜವನ್ನು ಒಡೆಯಲಾಗುತ್ತಿದೆ. ಹೀಗಾಗಿ ಸಮಾಜದಲ್ಲಿ ಸಾಮರಸ್ಯ ಮೂಡಿಸಿ ದೇಶ ಹಾಗೂ ರಾಜ್ಯವನ್ನು ಒಂದುಗೂಡಿಸಲು ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.

ಹಾಗೆಂದು ನೀವು ನಿಮ್ಮ ಜಾತಿ, ಧರ್ಮವನ್ನು ತ್ಯಜಿಸಿ ಎಂದು ಹೇಳುತ್ತಿಲ್ಲ. ನಾವೆಲ್ಲರೂ ಭಾರತೀಯರು. ನಮಗೆ ದೇಶದ ತ್ರಿವರ್ಣ ಧ್ವಜವನ್ನು ಧರಿಸುವ ಶಕ್ತಿ ಇದೆಯೇ ಹೊರತು ಬೇರೆಯವರಿಗಿಲ್ಲ. ಇದನ್ನು ದೇಶಕ್ಕೆ ಕೊಟ್ಟವರು ಕಾಂಗ್ರೆಸ್ಸಿಗರು. ನಿಮ್ಮ ಹಿರಿಯರು ತ್ಯಾಗ, ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ, ತ್ರಿವರ್ಣ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ನೀಡಿದ್ದಾರೆ. ಇದೆಲ್ಲವನ್ನು ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ನಿರ್ಮಿಸಿದ್ದು, ಇದನ್ನು ನಾವೆಲ್ಲರೂ ಸೇರಿ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನಿ ಆಗಬಹುದಿತ್ತು. ಆದರೆ ಅವರು ಈ ದೇಶಕ್ಕೆ ಆರ್ಥಿಕ ತಜ್ಞನ ಅವಶ್ಯಕತೆ ಇದೆ ಎಂದು ಮನಮೋಹನ್ ಸಿಂಗ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟರು. ರಾಹುಲ್ ಗಾಂಧಿ ಅವರು ಮಂತ್ರಿ, ಉಪಪ್ರಧಾನಿ ಆಗಬಹುದಿತ್ತು. ಅವರು ಅಧಿಕಾರ ತ್ಯಜಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂದರು.

ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಇವರು ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಗೆ ಪ್ರಾಣ ತ್ಯಾಗ ಮಾಡಿದ್ದಾರೆ. ಬಿಜೆಪಿಯವರು ಯಾರಾದರೂ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರಾ? ತ್ಯಾಗ ಬಲಿದಾನ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ನಮ್ಮದು ತಪ್ಪೋ, ಸರಿಯೋ ಬೇರೆ ಮಾತು. ಆದರೆ ಜನ ಸೋಲಿಸಿದ್ದಾರೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಉದಯಿಸುವ ಸೂರ್ಯ ಮುಳುಗಲೇಬೇಕು. ಮುಳುಗಿದ ಸೂರ್ಯ ಏಳಲೇಬೇಕು. ನಮ್ಮ ಸರ್ಕಾರ ಆಪರೇಷನ್ ಕಮಲಕ್ಕೆ ಬಲಿಯಾಗಿದೆ. ನನಗೆ ನಿಮ್ಮ ಹಾರ ತುರಾಯಿ ಬೇಡ, ಈ ಜಿಲ್ಲೆಯ ನಾಲ್ಕು ಶಾಸಕರನ್ನು ಗೆಲ್ಲಿಸಿ, ಅವರ ಜಯಮಾಲೆಯನ್ನು ನನಗೆ ಕೊಡಬೇಕು. ಆಗ ವಿಧಾನಸೌಧದಲ್ಲಿ ನೀವು ನಿಮ್ಮ ಮಂತ್ರಿ ಕಚೇರಿಗಳಿಗೆ ಓಡಾಡಬೇಕು ಎಂದರು.

ನೀವು ರಾಹುಲ್ ಗಾಂಧಿ ಅವರಿಗೆ ಹಾರ ತರಬೇಡಿ. ಅವರ ಭದ್ರತಾ ಸಿಬ್ಬಂದಿ ಅದಕ್ಕೆ ಅವಕಾಶ ನೀಡುವುದಿಲ್ಲ. ಈ ಕಾಲದಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ. ರಾಜೀವ್ ಗಾಂಧಿ ಅವರು ಹಾರ ಹಾಕಿಸಿಕೊಂಡು ಬಲಿಯಾದರು, ಇಂದಿರಾ ಗಾಂಧಿ ಅವರು ಭದ್ರತಾ ಸಿಬ್ಬಂದಿಯಿಂದಲೇ ಹತ್ಯೆಯಾದರು. ಹೀಗಾಗಿ ನೀವು ಹಾರ ತರಬೇಡಿ, ಬೇಸರ ಮಾಡಿಕೊಳ್ಳಬೇಡಿ. ನೀವು ಸಂತೋಷದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ, ಸಾಕು ಎಂದರು.

ಈ ಪಾದಯಾತ್ರೆಗೆ ಜಿಲ್ಲೆಯ ಪ್ರತಿ ಕ್ಷೇತ್ರದಿಂದ ಕನಿಷ್ಠ 10 ಸಾವಿರ ಜನರನ್ನು ಕರೆ ತರಬೇಕು. 20 ಕಿ.ಮೀ. ಹೆಜ್ಜೆ ಹಾಕಬೇಕು. ಕೊಳ್ಳೆಗಾಲದ ಮೂವರು ಮಾಜಿ ಶಾಸಕರು ನಾಳೆಯಿಂದಲೇ ಈ ಪಾದಯಾತ್ರೆ ವಿಚಾರವಾಗಿ ಜನಜಾಗೃತಿ ಮೂಡಿಸಬೇಕು. ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಜನರಿಗೆ ಮನವಿ ಮಾಡಬೇಕು. ಕೇವಲ ಸೀಟು ಬೇಕು ಎಂದು ಕೇಳಿದರೆ ಆಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಈ ಪಾದಯಾತ್ರೆಯ ಮುಖ್ಯ ಉದ್ದೇಶ ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು, ದೇಶ ಹಾಗೂ ರಾಜ್ಯದ ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿಸುವುದು, ಅಗತ್ಯ ವಸ್ತುಗಳ ಬೆಲೆ ಇಳಿಸುವುದಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕೇರಿದ್ದು ಜನರ ಆದಾಯ ಪಾತಾಳಕ್ಕೆ ಕುಸಿದಿದೆ. ಇದರಿಂದ ಬಡವರು, ಮಧ್ಯಮ ವರ್ಗದ ಜನಸಾಮಾನ್ಯರ ಜೇಬಿಗೆ ಪ್ರತಿನಿತ್ಯ ಕತ್ತರಿ ಬೀಳುತ್ತಿದೆ. ಬಿಜೆಪಿ ಆಡಳಿತದಲ್ಲಿ ಕರ್ನಾಟಕ ರಾಜ್ಯ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದ್ದು, ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಹಾಗೂ ರಾಜ್ಯದ ರೈತ ಹಾಗೂ ಕಾರ್ಮಿಕರ ಬದುಕನ್ನು ಹಸನ ಮಾಡಲು ರಾಹುಲ್ ಗಾಂಧಿಯವರು ಹೋರಾಟ ಮಾಡುತ್ತಿದ್ದಾರೆ ಎಂದರು.

ಈ ಪಾದಯಾತ್ರೆ ಸಮಯದಲ್ಲಿ ರಾಹುಲ್ ಗಾಂಧಿ ಅವರು ನಿರುದ್ಯೋಗ ಯುವಕರ ಜತೆ ಸಂವಾದ ಮಾಡಲಿದ್ದಾರೆ. ಈ ಸರ್ಕಾರದಲ್ಲಿ 40% ಕಮಿಷನ್ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇನ್ನು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಲಕ್ಷಗಟ್ಟಲೆ, ಕೋಟಿ, ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ. ಸರ್ಕಾರದ ಹುದ್ದೆಗಳಿಗೆ ದರ ನಿಗದಿ ಮಾಡಿದ್ದಾರೆ. ನೀವು ಒಂದು ದಿನಬೇಕಾದರೂ ನಡೆಯಬಹುದು, 21 ದಿನ ಬೇಕಾದರೂ ನಡೆಯಬಹುದು. ನೀವು ಭಾಗವಹಿಸಲು ಆನ್ ಲೈನ್ ನಲ್ಲಿ ನಿಮ್ಮ ಹೆಸರು ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಿದರು.

Join Whatsapp
Exit mobile version