Home ಟಾಪ್ ಸುದ್ದಿಗಳು ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿಯಲ್ಲಿ ಫ್ಲ್ಯಾಟ್ ಹಂಚಿಕೆ: ಕೇಂದ್ರ ಸಚಿವ ಹರ್ ದೀಪ್ ಸಿಂಗ್ ಪುರಿ

ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿಯಲ್ಲಿ ಫ್ಲ್ಯಾಟ್ ಹಂಚಿಕೆ: ಕೇಂದ್ರ ಸಚಿವ ಹರ್ ದೀಪ್ ಸಿಂಗ್ ಪುರಿ

ಮನೆಯೇ? ಬಂಧನ ಶಿಬಿರವೇ ಎಂದು ಕೇಳಿದ ರೋಹಿಂಗ್ಯನ್ನರು

ನವದೆಹಲಿ: ರೋಹಿಂಗ್ಯಾ ನಿರಾಶ್ರಿತರನ್ನು ನವದೆಹಲಿಯಲ್ಲಿರುವ ಆರ್ಥಿಕವಾಗಿ ದುರ್ಬಲ ವಿಭಾಗದ (EWS) ಫ್ಲಾಟ್’ಗಳಿಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಟೆಂಟ್ ಗಳಲ್ಲಿ ತಂಗಿರುವ ಸುಮಾರು 1100 ರೋಹಿಂಗ್ಯಾಗಳನ್ನು ಮೂಲಭೂತ ಸೌಕರ್ಯಗಳು ಮತ್ತು ದಿನದ 24 ಗಂಟೆ ಭದ್ರತೆಯನ್ನು ಹೊಂದಿರುವ ಫ್ಲ್ಯಾಟ್ ಗಳಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿದೆ.

ಮ್ಯಾನ್ಮಾರ್ ನಿಂದ ನವದೆಹಲಿಗೆ ಬಂದು ನೆಲೆಸಿದ ರೋಹಿಂಗ್ಯಾ ನಿರಾಶ್ರಿತರಿಗೆ ಫ್ಲಾಟ್ ಗಳನ್ನು ನೀಡಲಾಗುವುದು ಹಾಗೂ ಪೊಲೀಸ್ ರಕ್ಷಣೆ ಒದಗಿಸಲಾಗುವುದು ಎಂದು ಕೇಂದ್ರ ಮಂತ್ರಿ ಹರ್ ದೀಪ್ ಸಿಂಗ್ ಪುರಿ ಬುಧವಾರ ಹೇಳಿದರು.

ದಿಲ್ಲಿಯ ಬಕ್ಕರ್ ವಾಲಾ ಪ್ರದೇಶದಲ್ಲಿನ ಇಡಬ್ಲ್ಯುಎಸ್ ಫ್ಲಾಟ್ ಗಳಲ್ಲಿ ರೋಹಿಂಗ್ಯಾರಿಗೆ ವಸತಿ ಮಾಡಿಕೊಡಲಾಗುವುದು ಎಂದು ಸಚಿವರು ವಿವರಿಸಿದರು. ಅಲ್ಪಸಂಖ್ಯಾತರತ್ತ ಬಿಜೆಪಿಯು ತನ್ನ ನಿಲುವು ಬದಲಾಯಿಸಿ ಕೊಂಡಿದೆ ಎನ್ನುವುದರ ಸೂಚನೆ ಇದು ಎಂದು ಹೇಳಲಾಗುತ್ತಿದೆ.

“ಯಾರೇ ನಿರಾಶ್ರಿತರಾಗಿ ಬರಲಿ, ಭಾರತವು ಅವರನ್ನು ಸ್ವಾಗತಿಸಿದೆ. ರೋಹಿಂಗ್ಯಾ ಮುಸ್ಲಿಮರಿಗೆ ಬಕ್ಕರ್ ವಾಲಾದಲ್ಲಿ ಫ್ಲಾಟ್ ಗಳಲ್ಲದೆ, ನಾಗರಿಕ ಸವಲತ್ತುಗಳನ್ನು ಕೂಡ ಒದಗಿಸಲಾಗುವುದು” ಎಂದು ಮಂತ್ರಿ ಪುರಿ ಟ್ವೀಟ್ ಮಾಡಿದ್ದಾರೆ.

ಭಾರತವು 1951ರ ವಿಶ್ವಸಂಸ್ಥೆಯ ನಿರಾಶ್ರಿತರ ಸಮಾವೇಶದಲ್ಲಿ ಕೈಗೊಂಡ ತೀರ್ಮಾನವನ್ನು ಗೌರವಿಸುತ್ತದೆ ಮತ್ತು ಜನಾಂಗ, ವರ್ಗ, ಧರ್ಮ ನೋಡದೆ ನಿರಾಶ್ರಿತರಿಗೆ ಸಹಾಯ ಮಾಡುತ್ತದೆ ಎಂದು ಸಹ ಪುರಿ ಟ್ವೀಟಿದ್ದಾರೆ.

ಭಾರತದಲ್ಲಿ ರೋಹಿಂಗ್ಯಾ ನಿರಾಶ್ರಿತರ ಮೇಲೆ ಕೆಲವೆಡೆ ದಾಳಿ ನಡೆದಿದೆಯಾದರೂ ಹೇಳಿಕೊಳ್ಳುವಂಥ ಯಾವುದೇ ದೊಡ್ಡ ದಾಳಿಗಳು ನಡೆದಿಲ್ಲ. ಆದರೆ ಕೇಂದ್ರ ಸಚಿವರು 24 ಗಂಟೆಗಳ ಕಾಲ ಪೊಲೀಸ್ ರಕ್ಷಣೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಅದನ್ನು ವಿವರಿಸಿ ಹೇಳಿಲ್ಲ.

ಮ್ಯಾನ್ಮಾರ್ ನಲ್ಲಿ ವರ್ಷಗಟ್ಟಲೆ ಹಿಂಸಾಚಾರ ನಡೆದಾಗ ಅಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ದಾಳಿಗಳಾದುದರಿಂದ ಅವರು ನಾನಾ ದೇಶಗಳಿಗೆ ಹೋಗಿದ್ದಾರೆ. ನಿರಾಶ್ರಿತರಾಗಿ ಭಾರತಕ್ಕೂ ರೋಹಿಂಗ್ಯಾ ಮುಸ್ಲಿಮರು ಬಂದಿದ್ದಾರೆ. ಮೋದಿ ಸರಕಾರವು ಹಿಂದೆ ಅವರನ್ನು ಮ್ಯಾನ್ಮಾರ್ ಗೆ ವಾಪಸು ಕಳುಹಿಸಲು ತೀರ್ಮಾನಿಸಿತ್ತಾದರೂ ಅದು ಸಾಧ್ಯವಾಗಿಲ್ಲ.

ಬಾಂಗ್ಲಾದೇಶದಲ್ಲಿ 10,00,000 ರೋಹಿಂಗ್ಯಾ ಮುಸ್ಲಿಮರು ನಿರಾಶ್ರಿತರಾಗಿದ್ದಾರೆ. ಭಾರತದಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಸಂಖ್ಯೆ 18,000 ಎಂದು ಅಂದಾಜಿಸಲಾಗಿದೆ. ದಿಲ್ಲಿಯಲ್ಲಿ 1,100 ರೋಹಿಂಗ್ಯಾ ನಿರಾಶ್ರಿತರು ಇದ್ದಾರೆ. ಉಳಿದ 17,000ದಷ್ಟು ಜನ ದೇಶದ ನಾನಾ ಕಡೆ ಆಸರೆ ಹುಡುಕಿದ್ದಾರೆ.

“ಅವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರಾಗಿ, ಕೂಗಿ ಮಾರಾಟಗಾರರಾಗಿ, ಕೈಗಾಡಿ –ರಿಕ್ಷಾ ಎಳೆಯುವವರಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ರೋಹಿಂಗ್ಯಾ ಹಕ್ಕುಗಳ ಕಾರ್ಯಕರ್ತ ಆಲಿ ಜೋಹರ್ ಹೇಳುತ್ತಾರೆ.

ಈ ವರ್ಷ ಭಾರತದಿಂದ 2,000ದಷ್ಟು ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾ ದೇಶದ ನಿರಾಶ್ರಿತರ ಶಿಬಿರಗಳಿಗೆ ವಾಪಸು ಹೋಗಿದ್ದಾರೆ. ಅವರನ್ನು ಗಡಿಪಾರು ಮಾಡುವ ಭಯ ಅವರಿಗಿತ್ತು. ಕೆಲವರ ಮೇಲೆ ದಾಳಿಯೂ ನಡೆದಿತ್ತು.

ದಿಲ್ಲಿಯಲ್ಲಿ ಈಗ ಕೇಂದ್ರ ಸಚಿವರೇ ಫ್ಲಾಟ್ ಒದಗಿಸುವುದಾಗಿ ಹೇಳಿದ್ದಾರೆ, ದಿನದ 24 ಗಂಟೆಯೂ ಪೊಲೀಸ್ ರಕ್ಷಣೆ ಎಂದೂ ಹೇಳಿದ್ದಾರೆ. ನಿಜವಾಗಿ ವಸತಿ ಸಮುಚ್ಚಯ ನೀಡಲಾಗುತ್ತದೆಯೇ, ಬಂಧನ ಶಿಬರಗಳಲ್ಲಿ ಇಡಲಾಗುತ್ತದೆಯೇ ಎಂಬ ಸಂಶಯ ಇರುವುದಾಗಿ ರೋಹಿಂಗ್ಯಾ ನಿರಾಶ್ರಿತರ ಹಕ್ಕು ಕಾರ್ಯಕರ್ತ ಜೋಹರ್ ಹೇಳಿದ್ದಾರೆ.

ವಿಶ್ವ ಸಂಸ್ಥೆಯು ನಿರಾಶ್ರಿತರಿಗೆ ನಾಗರಿಕ ಹಕ್ಕು ಒದಗಿಸುವುದು ಕರ್ತವ್ಯ ಎಂದು ಹೇಳಿದೆ ಎಂಬುದನ್ನೂ 27ರ ಜೋಹರ್ ಹೇಳುತ್ತಾರೆ. ಜೋಹರ್ ಕುಟುಂಬವು ದಶಕಗಳ ಹಿಂದೆಯೇ ದಿಲ್ಲಿಗೆ ಬಂದಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.

ಬಲಪಂಥೀಯ ಸಂಘಟನೆಗಳು ರೋಹಿಂಗ್ಯ ಮುಸ್ಲಿಮರ ವಿರುದ್ಧ ಮುಕ್ತವಾಗಿಯೇ ಸಾಕಷ್ಟು ಬಾರಿ ಅಸಹನೆ ತೋರಿವೆ. ಭಾರೀ ದಾಳಿ ನಡೆಯದಿದ್ದರೂ, ಕೆಲ ಮಟ್ಟಿನ ತೊಂದರೆ ನೀಡಿದ್ದಿದೆ. ಈಗ ಅವರಿಗೆ ಒಂದು ಕಡೆ ಫ್ಲಾಟ್ ಹಂಚುವುದು ಎಂದರೆ ಅದು ಬಂಧನ ಶಿಬಿರದ ಮಾದರಿ ಇರಬಹುದೇ ಎಂಬ ಸಂಶಯವನ್ನು ಸಾಕಷ್ಟು ಮಂದಿ ನಿರಾಶ್ರಿತರು ಭಯ ಬೀಳುತ್ತಿರುವುದಾಗಿಯೂ ಜೋಹರ್ ಹೇಳಿದರು.

ಒಂದು ವೇಳೆ ಅದು ಬಂಧನ ಶಿಬಿರವಾದರೆ ಅದು ರೋಹಿಂಗ್ಯಾರಿಗೆ ದುಃಸ್ವಪ್ನ ಆಗಲಿದೆ ಎಂದೂ ಅವರು ಹೇಳಿದರು.

Join Whatsapp
Exit mobile version