Home ರಾಷ್ಟ್ರೀಯ ಕೇಂದ್ರ ಬಜೆಟ್‌: ಉದ್ಯೋಗ ಸೃಷ್ಟಿ, ತೈಲ ದರ ಇಳಿಕೆ ಬಗ್ಗೆ ಪ್ರಸ್ತಾಪವಿಲ್ಲ: ರಕ್ಷಾ ರಾಮಯ್ಯ

ಕೇಂದ್ರ ಬಜೆಟ್‌: ಉದ್ಯೋಗ ಸೃಷ್ಟಿ, ತೈಲ ದರ ಇಳಿಕೆ ಬಗ್ಗೆ ಪ್ರಸ್ತಾಪವಿಲ್ಲ: ರಕ್ಷಾ ರಾಮಯ್ಯ

ಬೆಂಗಳೂರು: ಕೇಂದ್ರ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್ ಮಂಡಿಸಿದ್ದು, ಇದರಲ್ಲಿ ಬಡವರು, ಯುವ ಸಮೂಹಕ್ಕೆ ಯಾವುದೇ ರೀತಿಯಲ್ಲೂ ಪರಿಹಾರ ದೊರೆತಿಲ್ಲ. ಉದ್ಯೋಗ ಸೃಷ್ಟಿ ಬಗ್ಗೆಯೂ ಯಾವುದೇ ಪ್ರಸ್ತಾಪವಿಲ್ಲ. ಜನ ಸಾಮಾನ್ಯರ ಸಂಕಷ್ಟ ನಿವಾರಣೆಗೆ ಪರಿಹಾರಗಳನ್ನೂ ಪ್ರಕಟಿಸಿಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ.ಎಸ್.‌ ರಕ್ಷಾ ರಾಮಯ್ಯ ಹೇಳಿದ್ದಾರೆ.

ಜಾಗತಿಕವಾಗಿ ಕಚ್ಚಾ ತೈಲ ದರ ಗಣನೀಯವಾಗಿ ಇಳಿಕೆಯಾಗಿದ್ದರೂ ಜನ ಸಾಮಾನ್ಯರಿಗೆ ಇದರ ಲಾಭ ವರ್ಗಾವಣೆ ಮಾಡುವ ಕೆಲಸ ಮಾಡುತ್ತಿಲ್ಲ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ದರ ಇಳಿಕೆ ಮಾಡುವ ಬಡವರ ಪರ ತೀರ್ಮಾನಗಳನ್ನು ಪ್ರಕಟಿಸಿಲ್ಲ. ಮಹಿಳೆಯರನ್ನು ಲಕ್ಷಾಧಿಪತಿ ಮಾಡುವ ಜುಮ್ಲಾ ಭರವಸೆಗಳನ್ನು ಈ ಬಜೆಟ್ ಕೊಟ್ಟಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಆರಂಭವಾದ ಸ್ತ್ರೀ ಶಕ್ತಿ ಸಂಘಗಳಲ್ಲಿ ನಮ್ಮ ಮಹಿಳೆಯರು ಈಗಾಗಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡು ದೇಶಕ್ಕೆ ಮಾದರಿಯಾಗಿ ಮುನ್ನಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಂದು ಕೋಟಿ ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ಉಚಿತ ವಿದ್ಯುತ್‌ ದೊರಕಿಸಿಕೊಡುವ ಜೊತೆಗೆ ಪ್ರತಿ ವರ್ಷ ಬಡವರಿಗೆ 15 ರಿಂದ 18 ಸಾವಿರ ರೂಪಾಯಿ ಆದಾಯ ದೊರೆಯುವಂತೆ ಮಾಡುವುದಾಗಿ ಬಜೆಟ್‌ನಲ್ಲಿ ಸಚಿವೆ ಹೇಳಿದ್ದಾರೆ. ಬರುವ ದಿನಗಳಲ್ಲಿ ಇದು ಜುಮ್ಲಾ ಭರವಸೆಯಾಗಲಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗಾಗಲೇ ಕೋಟ್ಯಂತರ ಕುಟುಂಬಗಳಿಗೆ ಉಚಿತ ವಿದ್ಯುತ್‌ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ನುಡಿದಂತೆ ನಡೆದಿದೆ. ಬಡವರ ಸಂಕಷ್ಟವನ್ನು ದೂರ ಮಾಡಿದೆ ಎಂದರು.

ಬಜೆಟ್‌ ಭಾಷಣದ ಉದ್ದಕ್ಕೂ ಅಭಿವೃದ್ಧಿ ಹೊಂದಿದ ಭಾರತ, ವಿಕಸಿತ ಭಾರತ ಎಂಬ ವರ್ಣಮಯ ಶಬ್ದಗಳನ್ನು ಬಳಸಿ ಜನ ಸಾಮಾನ್ಯರನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡಲಾಗಿದೆ.ವಾಸ್ತವವಾಗಿ ಸಾಮಾನ್ಯ ಜನರಿಗೆ ಬಜೆಟ್‌‌ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ರಕ್ಷಾ ರಾಮಯ್ಯ ಹೇಳಿದರು.

ಕರ್ನಾಟದದಿಂದ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ದೊರೆಯುತ್ತಿದ್ದು, ರಾಜ್ಯಕ್ಕೆ ಸೂಕ್ತ ಪಾಲು ಸಿಗುತ್ತಿಲ್ಲ. ಕೇಂದ್ರ ಹಣಕಾಸು ಆಯೋಗ ಕೇಂದ್ರ ಸರ್ಕಾರದ ಅಣತಿಯಂತೆ ಕುಣಿದು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದ ಯುವ ಕಾಂಗ್ರೆಸ್ ಕಾರ್ಯದರ್ಶಿ, ಕರ್ನಾಟಕವನ್ನು ಬಿಜೆಪಿ ಯಾವತ್ತಿಗೂ ನಮ್ಮ ದೇಶದ ಭಾಗವಾಗಿ ನೋಡಿಲ್ಲ. ಹಾಗಿದ್ದರೂ ನಮ್ಮಿಂದ 25 ಬಿಜೆಪಿ ಸಂಸದರು ಆಯ್ಕೆ ಆಗಿದ್ದಾರೆ. ರಾಜ್ಯ ಹಿತ ಕಾಯುವಲ್ಲಿ ಬಿಜೆಪಿ ಸಂಸದರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Join Whatsapp
Exit mobile version