ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆಯ ಭಾಷಣದಲ್ಲಿ ಜನಸಂಖ್ಯೆ ನಿಯಂತ್ರಣದ ಕುರಿತು ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಕ್ಕೆ ಸಿಪಿಐಎಂ ಆಕ್ಷೇಪ ವ್ಯಕ್ತಪಡಿಸಿದೆ.
ಇದು ಮುಸ್ಲಿಂ ಸಮುದಾಯಕ್ಕೆ ಕಳಂಕ ತರುವ ಉದ್ದೇಶವಾಗಿದೆ. ವಾಸ್ತವವಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ಕಾರಣವಾಗುವ ಶಿಕ್ಷಣವನ್ನು ಒದಗಿಸುವಂತಹ ಮೂಲಭೂತ ಕಾಳಜಿಗಳನ್ನು ಪರಿಹರಿಸುವ ಬದಲು, ಈ ಸರ್ಕಾರವು ಬೇರೆಯದ್ದೆ ಯೋಚಿಸುತ್ತಿದೆ ಎಂದು ಸಿಪಿಐ(ಎಂ) ಸಂಸದ (ರಾಜ್ಯಸಭೆ) ಡಾ. ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ.
ಆರೆಸ್ಸೆಸ್, ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಜನಸಂಖ್ಯೆಯ ಬೆಳವಣಿಗೆಯ ವಿಷಯವನ್ನು ಪದೇ ಪದೇ ಎತ್ತುತ್ತಿದ್ದು, ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ಕುಸಿದಿದ್ದರೂ ಅವರತ್ತ ಬೆರಳು ತೋರಿಸುತ್ತಿವೆ. ಪ್ರತಿಬಾರಿ ಬಿಜೆಪಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದು, ನಮಗೆ ಈ ಬಗ್ಗೆ ಕೆಲವು ಅನುಮಾನಗಳಿವೆ. ಈ ಬಗ್ಗೆ ವಿವರವಾದ ಸ್ಪಷ್ಟನೆಯನ್ನು ನೀಡಿ ಆ ನಂತರ ಸಮಿತಿಯನ್ನು ರಚಿಸಿದರೆ ಸರ್ಕಾರಕ್ಕೆ ಒಳಿತು ಎಂದು ಜಾನ್ ಬ್ರಿಟ್ಟಾಸ್ ಆಗ್ರಹಿಸಿದ್ದಾರೆ.
ಜನಸಂಖ್ಯೆಯ ವೇಗದ ಬೆಳವಣಿಗೆ ಮತ್ತು ಬದಲಾವಣೆಗಳಿಂದ ಉದ್ಭವಿಸಿರುವ ಸವಾಲುಗಳನ್ನು ಸಮಗ್ರವಾಗಿ ಪರಿಶೀಲಿಸಲು ಉನ್ನತ ಅಧಿಕಾರದ ಸಮಿತಿಯನ್ನು ಸರಕಾರ ಎಂದು ಬಜೆಟ್ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ಜನಸಂಖ್ಯೆ ನಿಯಂತ್ರಣ ಕಾನೂನನ್ನು ರೂಪಿಸಲು ಸರ್ಕಾರ ಕೆಲಸ ಮಾಡುತ್ತಿದೆ. ತಾನು ಸಚಿವರಾಗುವ ಮುನ್ನ ಲೋಕಸಭೆಯಲ್ಲಿ ಮಂಡಿಸಿದ ಖಾಸಗಿ ಸದಸ್ಯರ ಮಸೂದೆಯಲ್ಲಿ, ದೇಶ ಎದುರಿಸುತ್ತಿರುವ ಬಹುಪಾಲು ಸಮಸ್ಯೆಗಳಿಗೆ ಮೂಲ ಕಾರಣ ಜನಸಂಖ್ಯೆಯ ಅನಿಯಂತ್ರಿತ ಬೆಳವಣಿಗೆ ಎಂದು ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.