►► ವಿಪಕ್ಷಗಳ ಬೆಂಬಲ ದೊರೆತರೂ, ಇಲ್ಲದಿದ್ದರೂ ಜಾರಿಗೆ ಗಂಭೀರ ಚಿಂತನೆ !
ಲಕ್ನೋ: ಉತ್ತರ ಪ್ರದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುತ್ತೇವೆ, ಈ ಬಗ್ಗೆ ನಾವು ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಉ.ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ. ವಿರೋಧ ಪಕ್ಷಗಳ ಬೆಂಬಲ ದೊರಕಿದರೂ, ದೊರಕದೇ ಇದ್ದರೂ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶ ಸರಕಾರವು ಎಲ್ಲರಿಗೂ ಕಾನೂನುಗಳು ಸಮಾನವಾಗಿರಬೇಕೆಂಬ ದೃಷ್ಟಿಯಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಿದೆ, ಈ ಸಂಬಂಧ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಚರ್ಚೆಗಳು ನಡೆಯುತ್ತಿದೆ ಎಂದಿದ್ದಾರೆ. ಸಮಾನ ಸಂಹಿತೆಯನ್ನು ಬೆಂಬಲಿಸುವ ಬದಲು ಬಿಜೆಪಿಯೇತರ ಪಕ್ಷಗಳು ಓಲೈಸುವ ರಾಜಕಾರಣವನ್ನು ಅನುಸರಿಸುತ್ತಿದೆ ಎಂದು ಮೌರ್ಯ ಆರೋಪಿಸಿದರು.
ಸಮಾನ ನಾಗರಿಕ ಸಂಹಿತೆಯು ಉತ್ತರ ಪ್ರದೇಶ ಸೇರಿ ದೇಶದ ಇತರ ರಾಜ್ಯಗಳಿಗೂ ಅಗತ್ಯವಾಗಿದ್ದು, ಸಂವಿಧಾನದ 370ನೇ ವಿಧಿ ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಸಮಾನ ನಾಗರಿಕ ಸಂಹಿತೆ ನಮ್ಮ ಆದ್ಯತೆ ಎಂದರು. ಸಂವಿಧಾನದ 370ನೇ ವಿಧಿಯನ್ನು ವಿಪಕ್ಷಗಳ ಬೆಂಬಲ ದೊರಕದ ಹೊರತಾಗಿಯೂ ರದ್ದುಪಡಿಸಲಾಯಿತು. ಅದರಂತೆ ನಾಗರಿಕ ಸಂಹಿತೆಯನ್ನೂ ಜಾರಿಗೊಳಿಸುತ್ತೇವೆ ಎಂದು ಅವರು ಹೇಳಿದರು.