Home ಟಾಪ್ ಸುದ್ದಿಗಳು ನೈಜೀರಿಯಾ| ಅಕ್ರಮ ತೈಲ ಘಟಕದಲ್ಲಿ ಸ್ಫೋಟ: 100ಕ್ಕೂ ಅಧಿಕ ಮಂದಿ ಸಜೀವ ದಹನ

ನೈಜೀರಿಯಾ| ಅಕ್ರಮ ತೈಲ ಘಟಕದಲ್ಲಿ ಸ್ಫೋಟ: 100ಕ್ಕೂ ಅಧಿಕ ಮಂದಿ ಸಜೀವ ದಹನ

ನೈಜೀರಿಯಾ: ಗಾರವೊಂದರಲ್ಲಿ ಸ್ಫೋಟ ಸಂಭವಿಸಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ದಾರುಣ ಘಟನೆ ನೈಜೀರಿಯಾದ ದಕ್ಷಿಣ ರಾಜ್ಯ ಇಮೊದಲ್ಲಿ ನಡೆದಿದೆ. ಇಮೊ ದೇಶದ ಗಡಿ ಪ್ರದೇಶವಾದ ಎಗ್ಬೆಮಾ ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿನ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಶುಕ್ರವಾರ ತಡರಾತ್ರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಈವರೆಗೂ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಕ್ಸಿನ್ಹುವಾ ಸುದ್ದಿಸಂಸ್ಥೆ ಮಾಹಿತಿ ನೀಡಿದೆ.


ʻಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. 100ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಅವರ ದೇಹಗಳು ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಅಕ್ರಮ ಬಂಕರ್ ನಡೆಸುತ್ತಿದ್ದ ವ್ಯಕ್ತಿ, ಘಟನೆ ನಡೆದ ಬಳಿಕ ತಪ್ಪಿಸಿಕೊಂಡಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಇಮೊದ ಪೆಟ್ರೋಲಿಯಂ ಸಂಪನ್ಮೂಲಗಳ ಕಮಿಷನರ್ ಗುಡ್ಲಕ್ ಓಪಿಯಾ ಹೇಳಿದ್ದಾರೆ.


ನದಿ, ಕಾಡುಗಳಿಂದ ಸುತ್ತುವರಿದಿರುವ ಗಡಿ ಪ್ರದೇಶದಲ್ಲಿ ಅಕ್ರಮ ಬಂಕರ್ ಕಾರ್ಯನಿರ್ವಹಿಸುತ್ತಿತ್ತು. ಭಾರಿ ಸ್ಪೋಟ ಸಂಭವಿಸಿದ ಬಳಿಕ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಇದುವರೆಗೂ 108 ದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಇಮೋದಲ್ಲಿನ ತೈಲ ಮತ್ತು ಅನಿಲ ಉತ್ಪಾದನಾ ಪ್ರದೇಶಗಳ ಸುಪ್ರೀಂ ಕೌನ್ಸಿಲ್ನ ಅಧ್ಯಕ್ಷ ಕಾಲಿನ್ಸ್ ಅಜಿ ತಿಳಿಸಿದ್ದಾರೆ.


ತೈಲ ಕಂಪನಿಗಳ ಒಡೆತನದ ಪೈಪ್ಲೈನ್ಗಳಿಂದ ಕಚ್ಚಾ ತೈಲವನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಸುಧಾರಿತ ಟ್ಯಾಂಕ್ಗಳಲ್ಲಿ ಉತ್ಪನ್ನಗಳಾಗಿ ಬಟ್ಟಿ ಇಳಿಸುವ ಮೂಲಕ ಇಂತಹ ಅಕ್ರಮ ತೈಲ ಸಂಸ್ಕರಣಾಗಾರಗಳು ಕಾರ್ಯನಿರ್ವಹಿಸುತ್ತವೆ. ದೇಶದ ಆರ್ಥಿಕತೆಗೆ ಭಾರಿ ನಷ್ಟವನ್ನುಂಟುಮಾಡುವ ತೈಲ ಕಳ್ಳತನಗಳು ನೈಜೀರಿಯಾದಲ್ಲಿ ಪದೇ ಪದೇ ವರದಿಯಾಗುತ್ತಲಿರುತ್ತವೆ.

Join Whatsapp
Exit mobile version