Home ಅಂಕಣಗಳು ಏಕರೂಪ ನಾಗರಿಕ ಸಂಹಿತೆ: ಹಿಂದುತ್ವ ರಾಜಕೀಯದ ಹುನ್ನಾರ

ಏಕರೂಪ ನಾಗರಿಕ ಸಂಹಿತೆ: ಹಿಂದುತ್ವ ರಾಜಕೀಯದ ಹುನ್ನಾರ

✍️ನುಸೈಬ ಕಲ್ಲಡ್ಕ

ಮಧ್ಯ ಪ್ರದೇಶದ ಬೋಪಾಲ್ ನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ UCC ( uniform civil code) ಅಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು ಅಗತ್ಯವಿದೆ ಎಂದು ಹೇಳಿದ್ದಾರೆ. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಆಗುಹೋಗುಗಳನ್ನು ನ್ಯಾಯದ ದೃಷ್ಟಿಯಿಂದ ವೀಕ್ಷಿಸಿದವರಿಗೆ ಪ್ರಧಾನಿಯ ಈ ಹೇಳಿಕೆ ಅನಿರೀಕ್ಷಿತ ಆಗಿರಲಿಲ್ಲ. . ಬದಲಾಗಿ ನಿರೀಕ್ಷಿತವೇ ಆಗಿದೆ. ಕಾರಣ ಪ್ರಸ್ತುತ ದಿನಗಳಲ್ಲಿ ಈ ದೇಶದ ಜನತೆಗೆ ಯಾವುದರ ಅಗತ್ಯತೆ ಇಲ್ಲವೋ ಅಂತಹ ಕಾಯ್ದೆ, ಕಾನೂನುಗಳು ಬಹಳ ಬೇಗ ರೂಪುಗೊಳ್ಳುತ್ತದೆ.


ಒಂದೊಂದು ಧರ್ಮಕ್ಕೆ ಅನುಸಾರವಾಗಿ ಒಂದೊಂದು ಕಾನೂನು ಇರುವುದು ಸಮಾನತೆಗೆ ವಿರುದ್ಧ, ಇದು ತಾರತಮ್ಯ, ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ, ಜೊತೆಗೆ UCC ಯು ಮಹಿಳಾ ಸಮಾನತೆಯನ್ನು ಕಾಯ್ದುಕೊಳ್ಳುತ್ತದೆ ಎಂದೆಲ್ಲಾ ಮೋದಿಯವರು ಪ್ರತಿಪಾದಿಸಿದ್ದಾರೆ. ಮೀಸಲಾತಿ ವಿಚಾರವಾಗಿ ಮಣಿಪುರ ಹೊತ್ತಿ ಉರಿದಾಗ, ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳನ್ನು ನಡು ರಸ್ತೆಯಲ್ಲಿ ಹಿಡಿದು ಎಳೆದಾಡಿದಾಗ, ಗೋ ರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತ ಜೀವಗಳು ಬಲಿಯಾಗುತ್ತಿರುವಾಗ ಮೌನ ವಹಿಸಿದ, ತನ್ನ ಆಡಳಿತ ಕಾಲದಲ್ಲಿ ಗುಜರಾತಿನಲ್ಲಿ ಬಿಲ್ಕಿಸ್ ಬಾನು ಎಂಬ ಅಮಾಯಕ ಹೆಣ್ಣು ಮಗಳ ಮೇಲೆ ಅತ್ಯಾಚಾರ ಎಸಗಿ ಇಡೀ ಕುಟುಂಬವನ್ನು ಸರ್ವನಾಶ ಮಾಡಿದ್ದ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿಸಿದಾಗ ಅವರ ಪರವಾಗಿ ನಿಂತ ಮೋದಿಯವರು ಸಮಾನತೆಯ ಬಗ್ಗೆ ಮಾತನಾಡುವುದೆಂದರೆ ಹಾಸ್ಯಾಸ್ಪದ ಎನಿಸುವುದಿಲ್ಲವೇ..?


ಇಷ್ಟಕ್ಕೂ ಏಕರೂಪ ನಾಗರಿಕ ಸಂಹಿತೆ ಎಂದರೆ ಏನು?
ಭಾರತದಲ್ಲಿ ಮದುವೆ, ವಿಚ್ಛೇದನ, ದತ್ತು ನಿರ್ವಹಣೆ, ಉತ್ತರಾಧಿಕಾರದ ವಿಷಯಗಳಿಗೆ ಸಂಭಂದಿಸಿದಂತೆ ಆಯಾ ಧರ್ಮಗಳಿಗೂ ಅನುಗುಣವಾಗಿ ಅದರದೇ ಆದ ಪ್ರತ್ಯೇಕ ಕಾನೂನುಗಳಿವೆ. ಈ ಪ್ರತ್ಯೇಕ ಕಾನೂನುಗಳಿಗೆ ಬದಲಾಗಿ ಎಲ್ಲರಿಗೂ ಅನ್ವಯವಾಗುವಂತೆ ಒಂದೇ ರೂಪದ ಕಾನೂನನ್ನು ಹೇರುವುದೇ ಏಕರೂಪ ನಾಗರಿಕ ಸಂಹಿತೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ UCC ಯ ಅನುಷ್ಠಾನಕ್ಕೆ ತರಲು ರಚಿಸಲಾದ ಕಾನೂನು ಆಯೋಗವು ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಇದರ ಅಗತ್ಯವಿಲ್ಲವೆಂದು ವಿಶ್ಲೇಷಿಸಿ ವರದಿ ನೀಡಿದೆ. ದೇಶದಲ್ಲಿನ ಬಹುತ್ವಕ್ಕೆ ವಿರುದ್ಧವಾಗಿ ಜಾತ್ಯತೀತತೆಯು ವರ್ತಿಸಲು ಸಾಧ್ಯವಿಲ್ಲ ಎಂದೂ ಅದು ಪ್ರತಿಪಾದಿಸಿದೆ. ಅಲ್ಲದೆ ಏಕೀಕೃತಗೊಂಡಿರುವ ಒಂದು ದೇಶವು ಏಕರೂಪತೆಯನ್ನು ಹೊಂದಿರಬೇಕಾದ ಅಗತ್ಯವಿಲ್ಲವೆಂದೂ, ಒಂದು ದೃಢವಾದ ಪ್ರಜಾಪ್ರಭುತ್ವದಲ್ಲಿ ವಿಭಿನ್ನತೆಯು ಯಾವಾಗಲೂ ತಾರತಮ್ಯವನ್ನು ವ್ಯಕ್ತಗೊಳಿಸಿಲ್ಲ ಎಂದೂ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಬಿ. ಎಸ್. ಚೌಹಾಣ್ ನೇತೃತ್ವದ ಕಾನೂನು ಆಯೋಗವು ಪ್ರತಿಪಾದಿಸಿದೆ.


ಸಂವಿಧಾನದ 44ನೇ ವಿಧಿಯ ಪ್ರಕಾರ UCC ಯು ಸರ್ಕಾರದ ನಿರ್ದೇಶನಾತ್ಮಕ ತತ್ವಗಳ ಭಾಗವಾಗಿರುವುದರಿಂದ ಇದನ್ನು ರೂಪಿಸಿ ಜಾರಿಗೊಳಿಸುವುದು ತನ್ನ ಕರ್ತವ್ಯ ಎಂದು ಮೋದಿ ಸರ್ಕಾರ ವಾದಿಸುತ್ತದೆ. ಆದರೆ ಅದೇ ಸಂವಿಧಾನದ ಆರ್ಟಿಕಲ್ 37 ರ ಪ್ರಕಾರ “ನಿರ್ದೇಶನ ತತ್ವಗಳು ಸರ್ಕಾರಿ ನೀತಿಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆ ಅಷ್ಟೇ. ಇವುಗಳನ್ನು ನ್ಯಾಯಾಲಯಗಳ ಮೂಲಕ ಪಟ್ಟು ಹಿಡಿದು ಜಾರಿಗೊಳಿಸುವುದು ತರವಲ್ಲ” ಎನ್ನುವುದನ್ನು ಗಮನಿಸಬೇಕು.


ವಸ್ತುಸ್ಥಿತಿ ಹೀಗಿರುವಾಗ UCC ಹೇರಿಕೆಯ ಉದ್ದೇಶವು ಯಾವ ತಾರತಮ್ಯ ನೀತಿಯ ವಿರುದ್ಧವೂ ಅಲ್ಲ, ಬದಲಾಗಿ ಇದೂ ಕೂಡ ರಾಜಕೀಯ ಷಡ್ಯಂತ್ರದ ಭಾಗವೆಂದು ಸ್ಪಷ್ಟವಾಗುತ್ತದೆ.
ಬಹುತ್ವ ಭಾರತದ ಸೌಂದರ್ಯ. ವೈವಿಧ್ಯತೆಯೇ ಅದರ ಜೀವಾಳ. ವಿವಿಧತೆಯಲ್ಲೇ ಏಕತೆಯನ್ನು ಸಾರಿದ ದೇಶ ನಮ್ಮದು. ವಿಭಿನ್ನ ಜಾತಿ, ಧರ್ಮ, ಮತ ಪಂಗಡದವರು ಅವರವರ ಧಾರ್ಮಿಕ ಆಚಾರ ವಿಚಾರಗಳಲ್ಲಿ ಸಂತುಷ್ಟರಾಗಿರುವಾಗ ಏಕಾಏಕಿ UCC ಮೂಲಕ ಜನರ ಧಾರ್ಮಿಕ ಸ್ವಾತಂತ್ರ್ಯ, ನಂಬಿಕೆಗಳ ಮೇಲೆ ಪ್ರಹಾರ ನಡೆಸುವುದು ಎಷ್ಟು ಸಮಂಜಸ? ಪ್ರತ್ಯೇಕ ಕಾನೂನುಗಳ ಅನುಷ್ಠಾನದ ಸಮಯದಲ್ಲಿ UCC ಚರ್ಚೆಗೆ ಬಂದಿದ್ದರೂ ದೇಶದ ಬಹುತ್ವ ಸಂಸ್ಕೃತಿಗೆ ಧಕ್ಕೆ ಉಂಟಾಗಲಿದೆ ಎಂಬ ಕಾರಣಕ್ಕಾಗಿ ಸಂವಿಧಾನದ ನಿರ್ಮಾತೃರು UCC ಜಾರಿಗೆ ಅವಕಾಶ ನೀಡದೆ ರಾಜ್ಯ ನಿರ್ದೇಶನಾತ್ಮಕ ತತ್ವಗಳ ಭಾಗವಾಗಿಸಿರುವುದು ಕೂಡ ಗಮನಾರ್ಹ ಅಂಶವಾಗಿದೆ.


ದೇಶದ ಅಪರಾಧ ವಿಭಾಗದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಕಾನೂನುಗಳಿರುವುದನ್ನು ನಾವು ಗಮನಿಸಬಹುದು. ಉದಾಹರಣೆಗೆ ಕರ್ನಾಟಕದಲ್ಲಿ ಅಪರಾಧ ಕಾನೂನಿಡಿಯಲ್ಲಿ KSP (KARNATAKA STATE POLICE) ಆಕ್ಟ್ ಇದೆ. ಆದರೆ ಕೇರಳ, ತಮಿಳುನಾಡು, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಈ ಕಾನೂನು ಇಲ್ಲ. ಪಂಜಾಬ್ ನಲ್ಲಿ ಧಾರ್ಮಿಕ ನಿಂದನೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಇದೆ. ಆದರೆ ಉಳಿದ ರಾಜ್ಯಗಳಲ್ಲಿ ಕೇವಲ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹೀಗೆ ಆಯಾ ಧರ್ಮದವರು ಬಹುಸಂಖ್ಯಾತರಾಗಿರುವ ರಾಜ್ಯಗಳಲ್ಲಿ ಅವರ ಧಾರ್ಮಿಕತೆಗೆ ಅನುಗುಣವಾಗಿ ಕಾನೂನುಗಳಲ್ಲಿ ಬದಲಾವಣೆಗಳಿವೆ. ಸಂವಿಧಾನದ ಅಡಿಯಲ್ಲಿ ಈ ಕಾನೂನುಗಳಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದ್ದರೂ ಅಪರಾಧ ಕಾನೂನುಗಳು ಇನ್ನೂ ಏಕರೂಪವಾಗಿ ಜಾರಿಗೊಂಡಿಲ್ಲ. ಈಗಾಗಲೇ ಏಕರೂಪ ಸಂಹಿತೆ ಜಾರಿಯಲ್ಲಿರುವ ಗೋವಾದಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯ ಧರ್ಮೀಯರಿಗೆ ಬಹುಪತ್ನಿತ್ವ ನಿಷೇಧವಿದೆ. ಇದನ್ನು ಏಕರೂಪ ನಾಗರಿಕ ಸಂಹಿತೆ ಎಂದು ಬಿಂಬಿಸಲು ಸಾಧ್ಯವೇ? ಇನ್ನು ಸಂವಿಧಾನದ 25- 28-29-30 ರ ವಿಧಿಯಂತೆ ಅಲ್ಪಸಂಖ್ಯಾತರ ಹಕ್ಕುಗಳ ಅಡಿಯಲ್ಲಿ ಅವರಿಗೆ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಅಧಿಕಾರವೂ ಇದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸದೆ ಏಕಾಏಕಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಹೇಗೆ ಸಾಧ್ಯವಾಗಲಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.


ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವುದು, ಸಮಾನ ನ್ಯಾಯವನ್ನು ಕಲ್ಪಿಸುವುದು, ಅವರ ನಂಬಿಕೆಗಳನ್ನು ಗೌರವಿಸುವುದು ಪ್ರಭುತ್ವದ ಆದ್ಯತೆಯಾಗಿರಬೇಕು. ಇದರ ಹೊರತಾಗಿಯೂ UCC ಯ ಜಾರಿಗೆ ಪಣತೊಟ್ಟಂತಿರುವ ಮೋದಿ ಸರ್ಕಾರದ ನಡೆ ಮುಂದಿನ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳುತ್ತಿರುವ ಅಸ್ತ್ರವಾಗಿ ಕಂಡುಬರುತ್ತಿದೆ. ಜನರನ್ನು ಸೆಳೆಯಲು ಅಭಿವೃದ್ಧಿ ಕಾರ್ಯಗಳೇನೂ ಕೈಯಲ್ಲಿ ಇಲ್ಲದಿರುವಾಗ ಇಂತಹ ಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟುಕೊಂಡು ಬಹುಸಂಖ್ಯಾತರನ್ನು ಓಲೈಸುವುದು ಬಿಜೆಪಿಯ ಎಂದಿನ ಪರಿಪಾಠ. ಅಲ್ಲದೆ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ಹೊಂದಿರುವ ಬಿಜೆಪಿಗೆ 2024 ರ ಲೋಕಸಭಾ ಚುನಾವಣೆ ಮಹತ್ವದ್ದಾಗಿದೆ. ಜೊತೆಗೆ 2025 ಆರ್ ಎಸ್ ಎಸ್ ನ ಶತಮಾನೋತ್ಸವ ವರ್ಷ. ಈ ನೂರನೇ ವರ್ಷದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಬಿಜೆಪಿ ಎಲ್ಲ ರೀತಿಯ ಕಸರತ್ತುಗಳನ್ನು ನಡೆಸುತ್ತಿದೆ ಎಂದು ಹಲವು ಹಿರಿಯ ಲೇಖಕರು ಚಿಂತಕರು ಆತಂಕ ವ್ಯಕ್ತಪಡಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆಯು ಕೂಡ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತ ಹಿಂದೂ ಸಿದ್ದಾಂತವನ್ನು ಹೇರುವ ಹುನ್ನಾರವೆಂದು ಹೇಳಲಾಗುತ್ತಿದೆ.


ಒಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆಯು ದೇಶದ ಏಕತೆಗೆ, ಸಮಗ್ರತೆಗೆ ಮಾರಕವಾಗಲಿದೆ ಎಂಬುದನ್ನು ದೇಶದ ಪ್ರಜ್ಞಾವಂತ ನಾಗರಿಕರು ಅರ್ಥಮಾಡಿಕೊಳ್ಳಬೇಕು. ಹಾಗೆಯೇ NRC CAA ಎಂಬ ಅತ್ಯಂತ ತಾರತಮ್ಯದ ನೀತಿಯ ವಿರುದ್ಧ ತೋರಿದಂತೆ UCC ವಿರುದ್ಧವೂ ಭಾರೀ ಪ್ರತಿರೋಧ ಒಡ್ಡಲು ಸನ್ನದ್ದವಾಗಬೇಕು.

Join Whatsapp
Exit mobile version