ಬೆಂಗಳೂರು: ಪ್ರತಿಭಟನಾನಿರತ ಸಂಸದರನ್ನು ತಳ್ಳಾಡಿ, ಬೀಳಿಸಿ, ಬಟ್ಟೆ ಹರಿಯಲಾಗಿದೆ. ನಮ್ಮ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 1977ರಲ್ಲಿ ಅಧಿಕೃತವಾಗಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಆದರೆ ಇಂದು ಮೋದಿ ಅವರ ಕಾಲದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ವಿರುದ್ಧ ಯಾರೂ ಮಾತನಾಡುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ. ಅವರ ವಿರುದ್ಧ ಮಾತನಾಡಿದವರ ವಿರುದ್ಧ ಐಟಿ, ಇಡಿ ಸಂಸ್ಥೆಗಳನ್ನು ಛೂ ಬಿಡುವುದು, ಸುಳ್ಳು ಪ್ರಕರಣ ದಾಖಲಿಸುವುದು ಎಲ್ಲವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೋದಿ, ಅಮಿತ್ ಶಾ ಹಾಗೂ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. 2017ರಲ್ಲಿ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ನಾಯಕರ ಜಾತಕ ನನ್ನ ಬಳಿ ಇದೆ ಎಂದು ಹೇಳಿದ್ದರು. ಇವರ ಜಾತಕ ಇಡೀ ದೇಶಕ್ಕೆ ಗೊತ್ತಿದೆ. ಈ ಚುನಾವಣೆ ಸಮೀಪಿಸುತ್ತಿದಂತೆ ಇಂತಹ ದಾಳಿಗಳು ಸಹಜ. ಇತ್ತೀಚೆಗೆ ಪಂಚರಾಜ್ಯ ಚುನಾವಣೆ ನಡೆಯುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಲ್ಲಿ ಇಂತಹ ದಾಳಿ ನಡೆದಿದ್ದವು. ಈಗ ಕರ್ನಾಟಕ ಹಾಗೂ ಗುಜರಾತಿನಲ್ಲಿ ಚುನಾವಣೆಗಳು ಸಮೀಪಿಸುತ್ತಿದ್ದು, ಹೀಗಾಗಿ ಕಾಂಗ್ರೆಸ್ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ಈ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಳೆದ ಒಂದು ದಶಕದಲ್ಲಿ 1569 ಪ್ರಕರಣಗಳು PMLA ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಕೇವಲ 9 ಪ್ರಕರಣಗಳಲ್ಲಿ ಮಾತ್ರ ಅಪರಾಧಗಳು ಸಾಬೀತಾಗಿದೆ. ಕೇವಲ ಕಾಂಗ್ರೆಸ್ ನಾಯಕರು ಮಾತ್ರವಲ್ಲ ಬಿಜೆಪಿ ರಾಜಕೀಯ ವಿರೋಧಿಗಳ ಎಲ್ಲರ ಮೇಲೂ ಇಂತಹ ಸುಳ್ಳು ಪ್ರಕರಣ ದಾಖಲಾಗುತ್ತಿವೆ. ಶಿವಸೇನೆ ನಾಯಕ, ಮಹಾರಾಷ್ಟ್ರ ಸಚಿವ ಅನಿಲ್ ಪರಬ್, ಎನ್ ಸಿಪಿ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಒಟ್ಟು 1569 ಪ್ರಕರಣ ದಾಖಲಿಸಿದ್ದಾರೆ. ಇವರ ರಾಜಕೀಯ ಷಡ್ಯಂತ್ರಗಳಿಗೆ ನಾವು ಹೆದರುವುದಿಲ್ಲ. ಕಾಂಗ್ರೆಸಿಗರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಾಣ ತ್ಯಾಗ ಮಾಡಿ, ತಮ್ಮ ಆಸ್ತಿಯನ್ನು ತ್ಯಾಗ ಮಾಡಿದ್ದಾರೆ. ಆರ್ ಎಸ್ ಎಸ್ ನವರಂತೆ ನಾವು ಬ್ರಿಟಿಷರ ಜತೆ ಕೈಜೋಡಿಸಿರಲಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಜನರ ವಿಚಾರದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುವುದಿಲ್ಲ ಈಗ ಮಾಡಲಾಗುತ್ತಿದೆಯೆಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾವು ಪ್ರತಿ ಬಾರಿಯೂ ಹೋರಾಟ ಮಾಡಿದ್ದೇವೆ. ಬೆಲೆ ಏರಿಕೆ, ಮೇಕೆದಾಟು, ಬಿಬಿಎಂಪಿ, ರಸ್ತೆಗುಂಡಿ ವಿಚಾರವಾಗಿ ನಾವು ಬೀದಿಗಿಳಿದು ಹೋರಾಟ ಮಾಡುತ್ತಲೇ ಬಂದಿದ್ದೇವೆ. ನಮ್ಮ ಹೋರಾಟ ಹೇಳಿಕೆಗಳನ್ನು ಮಾಧ್ಯಮಗಳು ಸರಿಯಾಗಿ ಜನರಿಗೆ ತೋರಿಸಿದರೆ ಸಾಕು. ಆಗ ಜನರಿಗೆ ನಮ್ಮ ಹೋರಾಟದ ಬಗ್ಗೆ ತಿಳಿಯುತ್ತದೆ’ ಎಂದರು.
ಮುಖ್ಯಮಂತ್ರಿಗಳ ನಗರ ಪ್ರದಕ್ಷಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದು 9 ತಿಂಗಳಾಗಿದ್ದು, ಇಷ್ಟು ದಿನ ನಗರದ ರೌಂಡ್ಸ್ ಮಾಡಿರಲಿಲ್ಲ. ಆದರೆ ಈಗ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಯ್ದ ಕ್ಷೇತ್ರಗಳಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಮುನಿರತ್ನ, ಉದಯ್ ಗರುಡಾಚಾರ್, ಸೋಮಣ್ಣ ಅವರ ಕ್ಷೇತ್ರಗಳಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಎಂದರೆ ಬಿಜೆಪಿ ಶಾಸಕರ ಕ್ಷೇತ್ರ ಅಭಿವೃದ್ಧಿ ಎಂದು ಸಿಎಂ ತಿಳಿದಿದ್ದಾರೆ. ಎಲ್ಲ 28 ಕ್ಷೇತ್ರಗಳು ಅಭಿವೃದ್ಧಿಯಾದರೆ ಬೆಂಗಳೂರು ಅಭಿವೃದ್ಧಿಯೇ ಹೊರತು, ಕೇವಲ 15 ಕ್ಷೇತ್ರಗಳು ಅಭಿವೃದ್ಧಿಯಾದರೆ ಬೆಂಗಳೂರು ಅಭಿವೃದ್ಧಿ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಮೋದಿ ಹಾಗೂ ನಡ್ಡಾ ಅವರ ರಾಜ್ಯ ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ, ಮೋದಿ ಅವರು ಸಾಗುವ ರಸ್ತೆಗಳಿಗೆ ಟಾರು ಹಾಕುತ್ತಿದ್ದಾರೆ. ಹೀಗಾಗಿ ಮೋದಿ ಅವರು ಆಗಾಗ್ಗೆ ಬೆಂಗಳೂರಿಗೆ ಬಂದು ಹೋದರೆ ರಸ್ತೆಗಳು ಸರಿಯಾಗುತ್ತವೆ. ಇನ್ನು ಸ್ಲಂ ಕಾಣಿಸಬಾರದು ಎಂದು ಗೋಡೆ ಕಟ್ಟಿಸುತ್ತಾರೆ. 8 ವರ್ಷದಲ್ಲಿ ಕರ್ನಾಟಕ ರಾಜ್ಯದಿಂದ 19 ಲಕ್ಷ ಕೋಟಿ ರೂ. ತೆರಿಗೆ ವಸೂಲಿಯಾಗಿದ್ದು, ರಾಜ್ಯಕ್ಕೆ ಕೇಂದ್ರದಿಂದ ಬಂದಿರುವುದು 4.5 ಲಕ್ಷ ಕೋಟಿ. ರಾಜ್ಯದಲ್ಲಿ ನೆರೆ ಆದಾಗಲೂ ಸೂಕ್ತ ಪರಿಹಾರ ಕೊಡಲಿಲ್ಲ. ಜಿಎಸ್ಟಿ ಪಾಲು ಸರಿಯಾಗಿ ಕೊಡಲಿಲ್ಲ. ಕೇವಲ ಮಾಧ್ಯಮಗಳ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ’ ಎಂದು ರಾಮಲಿಂಗಾ ರೆಡ್ಡಿ ಟೀಕಿಸಿದರು.