Home ಟಾಪ್ ಸುದ್ದಿಗಳು ಚಿಕಿತ್ಸೆ ವೆಚ್ಚ ಭರಿಸಲಾಗದೆ ಯುವತಿಯನ್ನು ದೇವದಾಸಿ ಪದ್ಧತಿಗೆ ನೂಕಿದ ಪೋಷಕರು

ಚಿಕಿತ್ಸೆ ವೆಚ್ಚ ಭರಿಸಲಾಗದೆ ಯುವತಿಯನ್ನು ದೇವದಾಸಿ ಪದ್ಧತಿಗೆ ನೂಕಿದ ಪೋಷಕರು

ಕೊಪ್ಪಳ: ಅನಾರೋಗ್ಯದಿಂದ ಬಳಲುತ್ತಿದ್ದ 22 ವರ್ಷದ ಯುವತಿಯೋರ್ವಳ ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ಕುಟುಂಬದವರೇ ದೇವದಾಸಿ ಪದ್ಧತಿಗೆ ತಳ್ಳಿರುವ ಆಘಾತಕಾರಿ ಪ್ರಕರಣ ಕೊಪ್ಪಳ ತಾಲೂಕಿನ ಚಿಲವಾಡಗಿಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಯುವತಿಯ ಪೋಷಕರಾದ ಯಮನೂರಪ್ಪ, ಹುಲಿಗೆವ್ವ  ಮತ್ತು ಆಕೆಯ ಸಹೋದರಿ ಮೂಕವ್ವ ಬಂಧಿತ ಆರೋಪಿಗಳು. ಮುನೀರಾಬಾದ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೂಕವ್ವಳ  ಪತಿ ಹನುಮಪ್ಪನ ಪತ್ತೆಗೆ ಪೊಲೀಸರು ಬಲೆ ಬೀಸಲಾಗಿದೆ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಈ ಘಟನೆ ನಡೆದಿದ್ದು, ಕೊಪ್ಪಳದ ದೇವದಾಸಿ ಪುನರ್ವಸತಿ ಕಾರ್ಯಕ್ರಮದ ಜಿಲ್ಲಾ ಯೋಜನಾಧಿಕಾರಿ ಪೂರ್ಣಿಮಾ ಯೋಳಭಾವಿ ನೇತೃತ್ವದ ತಂಡ ಗ್ರಾಮಸ್ಥರಿಂದ ಸುಳಿವು ಪಡೆದು ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ. ಡಿಸೆಂಬರ್ 26 ರಂದು ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಯುವತಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಇದಕ್ಕೆ ದೇವರ ಶಾಪವೇ ಕಾರಣ ಎಂದು ಕುಟುಂಬಸ್ಥರು ತಿಳಿಸಿದ್ದರೆನ್ನಲಾಗಿದೆ. ಈ ಸಂಬಂಧ ದೇವದಾಸಿಯನ್ನಾಗಿ ಮಾಡಿದರೆ ಗುಣಮುಖ ಆಗುವರು ಎಂಬ ಮೂಢನಂಬಿಕೆಯಿಂದ ಹೆತ್ತವರೇ ಹುಲಿಗಿಯಲ್ಲಿ ಯುವತಿಯನ್ನು ದೇವದಾಸಿಯಂಥ ಅನಿಷ್ಠ ಪದ್ಧತಿಗೆ ನೂಕಿದ್ದರು ಎಂದು ತಿಳಿದುಬಂದಿದೆ.

Join Whatsapp
Exit mobile version