Home ಕರಾವಳಿ ಉಳ್ಳಾಲ । ಭಾರತ್ ಪ್ರೌಢಶಾಲೆಯಲ್ಲಿ ಹಿಜಾಬ್ ಗೆ ತಡೆ; ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಉಳ್ಳಾಲ । ಭಾರತ್ ಪ್ರೌಢಶಾಲೆಯಲ್ಲಿ ಹಿಜಾಬ್ ಗೆ ತಡೆ; ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಉಳ್ಳಾಲ: ಮಂಗಳೂರಿನ ಹೊರ ವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಭಾರತ್ ಪ್ರೌಢಶಾಲೆಯಲ್ಲಿ ಹಿಜಾಬ್ ವಿಚಾರ ತಾರಕಕ್ಕೇರಿದ್ದು, ಇವತ್ತು ಮತ್ತೆ ಹಿಜಾಬ್ ಧರಿಸಿ ತರಗತಿಗೆ ಬಂದ ವಿದ್ಯಾರ್ಥಿನಿಗಳನ್ನು ಗೇಟ್ ಬಳಿಯಲ್ಲೇ ತಡೆದು ನಿಲ್ಲಿಸಿದ ಆಡಳಿತ ಮಂಡಳಿ ಹಿಜಾಬ್ ತೆಗೆದುಕೊಂಡು ತರಗತಿಗೆ ಬರುವಂತೆ ಸೂಚಿಸಿದೆ. ಶಾಲಾ ಆಡಳಿತ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

https://prasthutha.com/wp-content/uploads/2022/02/WhatsApp-Video-2022-02-25-at-10.02.59.mp4

ವಿದ್ಯಾರ್ಥಿಗಳ ಪ್ರತಿಭಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಆಡಳಿತ ಮಂಡಳಿಯ ನಡೆಯನ್ನು ಖಂಡಿಸಿ, ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ಸದ್ಯ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ.

ಈ ಮಧ್ಯೆ ವಿದ್ಯಾರ್ಥಿಗಳ ಪ್ರತಿಭಟನೆಯ ವಿಷಯವನ್ನರಿತ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡುತ್ತ ‘ ಸರ್ಕಾರದ ಸುತ್ತೋಲೆಯ ಅನ್ವಯ ಶಾಲಾ ಆಡಳಿತ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಸಮಸ್ಯೆ ಬಗೆಹರಿಯುವರೆಗೆ ವಿದ್ಯಾರ್ಥಿಗಳು ಆಕ್ರೋಶಿತರಾಗಿ ಪ್ರತಿಭಟಿಸದೆ ಸಂಯಮ ಪಾಲಿಸಬೇಕು. ಇನ್ನುಳಿದ ಎರಡು ದಿನಗಳಲ್ಲಿ ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಮುಂದಿನ ಹೆಜ್ಜೆಯನ್ನು ತಿಳಿಸಲಾಗುವುದು. ಈ ಸಮಯದಲ್ಲಿ ವಿದ್ಯಾರ್ಥಿಗಳು ತರಗತಿಗೆ ಆಗಮಿಸದೆ ಮನೆಯಲ್ಲಿರುವಂತೆ’ ವಿದ್ಯಾರ್ಥಿಗಳಲ್ಲಿ ಮನವಿಮಾಡಿದ್ದಾರೆ.

ದರ್ಗಾ ಅಧ್ಯಕ್ಷರ ಈ ಮಾತಿಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು, ಮುಸ್ಲಿಮ್ ಎಂಬ ಕಾರಣಕ್ಕಾಗಿ ನಮ್ಮನ್ನು ಶಿಕ್ಷಣದ ಹಕ್ಕಿನಿಂದ ವಂಚಿತರನ್ನಾಗಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ನಮಗೆ ನಮ್ಮ ಹಕ್ಕು ನೀಡುವಂತೆ ಆಡಳಿತ ಮಂಡಳಿಗೆ ಸೂಚಿಸಿ ನ್ಯಾಯಾಲಯದ ಆದೇಶದ ವರೆಗೂ ಹಿಜಾಬ್ ಧರಿಸಿ ತರಗತಿಗೆ ಆಗಮಿಸಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿ ಪಟ್ಟು ಹಿಡಿದರು. ಆಡಳಿತ ಮಂಡಳಿ ತಮ್ಮ ಬೇಡಿಕೆಗೆ ಒಪ್ಪದಿದ್ದರೆ ತರಗತಿಗೆ ರಜೆ ಘೋಷಿಸುವಂತೆ ಒತ್ತಾಯಿಸಿದರು.

ವಿದ್ಯಾರ್ಥಿಗಳ ಪಟ್ಟ ಬಿಡದ ಹೋರಾಟಕ್ಕೆ ಮಣಿದ ದರ್ಗಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ ಅವರು ಭಾರತ್ ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಮುಂದಿನ ಸೋಮವಾರದ ವರೆಗೆ ರಜೆ ಘೋಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಧ್ಯೆ ಶಾಲಾ ವಿದ್ಯಾರ್ಥಿಗಳು ಮನೆಗೆ ತೆರಳಿದ ಬಳಿಕ ಸ್ಥಳಕ್ಕಾಗಮಿಸಿದ ಶಾಸಕ ಯು.ಟಿ. ಖಾದರ್ ಅವರು ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಸದ್ಯ ಕರ್ನಾಟಕದ ಹಿಜಾಬ್ ವಿಚಾರ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯದ ಮಧ್ಯಂತರ ಆದೇಶದನ್ವಯ ಶಾಲಾ ಅಭಿವೃದ್ಧಿ ಮಂಡಳಿ ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ನ್ಯಾಯಾಲಯದ ಆದೇಶದ ವರೆಗೆ ಹಿಜಾಬ್ ಧರಿಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

Join Whatsapp
Exit mobile version