ಕೀವ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರು ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪತ್ನಿ ಒಲೆನಾ ಝೆಲೆನ್‌ಸ್ಕಾ ಜತೆ ಮಾತುಕತೆ ನಡೆಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಯುದ್ಧವನ್ನು ನಿಲ್ಲಿಸಬೇಕಾಗಿದೆ. ಇದು ತುಂಬಾ ಕ್ರೂರವಾದದ್ದು. ಅಮೆರಿಕದ ಜನರು ಉಕ್ರೇನ್ ಜನರ ಜತೆಗಿದ್ದಾರೆ ಎಂಬುದನ್ನು ತೋರಿಸಿಕೊಡಬೇಕಾದದ್ದು ಮುಖ್ಯ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.
ಜಿಲ್ ಬೈಡನ್ ಅವರು ಉಕ್ರೆನ್ ಮತ್ತು ಆ ದೇಶದ ಮೇಲೆ ರಷ್ಯಾ ಅತಿಕ್ರಮಣ ಆರಂಭವಾದ ಬಳಿಕ ನೆರವು ನೀಡುತ್ತಿರುವ ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕದ ಬೆಂಬಲ ಪ್ರದರ್ಶಿಸುವ ಸಲುವಾಗಿ ಅವರು ಈ ಪ್ರವಾಸ ಕೈಗೊಂಡಿದ್ದು, ಸ್ಲೊವಾಕಿಯಾ ಮೂಲಕ ಅವರು ಉಕ್ರೇನ್‌ಗೆ ಪ್ರಯಾಣ ಬೆಳೆಸಿದ್ದರು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಅತಿಕ್ರಮಣ ಆರಂಭವಾದ ಬಳಿಕ ಝೆಲೆನ್‌ಸ್ಕಿ ಪತ್ನಿ ಒಲೆನಾ ಝೆಲೆನ್‌ಸ್ಕಾ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ ಎಂದು ಜಿಲ್ ಬೈಡನ್ ಜತೆ ಪ್ರಯಾಣ ಕೈಗೊಂಡಿರುವ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.