ನವದೆಹಲಿ: ಉಕ್ರೇನ್’ನಲ್ಲಿ ಸಿಲುಕಿರುವ ಸಂತ್ರಸ್ತರನ್ನು ಸ್ಥಳಾಂತರಿಸುವಲ್ಲಿ ತಾರತಮ್ಯ ಎಸಗಲಾಗುತ್ತಿದ್ದು, ಉತ್ತರ ಭಾರತೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಮತ್ತು ದಕ್ಷಿಣದವರನ್ನು ಸ್ಥಳಾಂತರಿಸುವಲ್ಲಿ ಕಡೆಗಣಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ನೆರವಿನಿಂದ ಪೋಲೆಂಡ್ ಮೂಲಕ ದೆಹಲಿಗೆ ತಲುಪಿದ ತಮಿಳುನಾಡಿನ ಕೆಲವು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ತಮಿಳುನಾಡಿನ ಅನೇಕ ವಿದ್ಯಾರ್ಥಿಗಳನ್ನು ದಕ್ಷಿಣ ಭಾರತದವರೆಂಬ ನೆಲೆಯಲ್ಲಿ ವಿಮಾನ ಹತ್ತದಂತೆ ಹಲವು ಗಂಟೆಗಳ ಕಾಲ ತಡೆಹಿಡಿಯಲಾಗಿತ್ತು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳ ಕರೆಗಳ ಆಧಾರದಲ್ಲಿ ಸ್ಥಳಾಂತರಿಸಲಾಗುತ್ತಿದೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಸಿಪಿಐ (ಎಂ) ಪಕ್ಷದ ನಾಯಕ ಎಳಮರಮ್ ಕರೀಮ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ ಶಂಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.