Home ಟಾಪ್ ಸುದ್ದಿಗಳು ಇಡಿ ವಿಚಾರಣೆ ನೆಪದಲ್ಲಿ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ: ಬಿಜೆಪಿ ವಿರುದ್ಧ ಉಗ್ರಪ್ಪ ಕಿಡಿ

ಇಡಿ ವಿಚಾರಣೆ ನೆಪದಲ್ಲಿ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ: ಬಿಜೆಪಿ ವಿರುದ್ಧ ಉಗ್ರಪ್ಪ ಕಿಡಿ

ಬೆಂಗಳೂರು: ಈ ನೆಲದ ಕಾನೂನು ಹಾಗೂ ಅದರ ವಿಧಿ ವಿಧಾನಗಳು, ದೇಶದ ಸಂವಿಧಾನ ಹಾಗೂ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರಿವಿದ್ದಿದ್ದರೆ, ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿರಲಿಲ್ಲ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ದೇಶದ ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಬೆಲೆ ಏರಿಕೆ ಗಗನಕ್ಕೇರುತ್ತಿದೆ. ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಪಾಕ್ ಹಾಗೂ ಚೀನಾದಿಂದ ಭಾರತದ ಗಡಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರೈತರ ಸಮಸ್ಯೆ ಹೆಚ್ಚಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು. ಈಗ 18 ತಿಂಗಳಲ್ಲಿ 10 ಲಕ್ಷ ಸರ್ಕಾರಿ ಹುದ್ದೆಗಳನ್ನು ತುಂಬಲು ಘೋಷಿಸಿದ್ದಾರೆ. ಇಂದು ಈ ಎಲ್ಲ ವಿಚಾರಗಳನ್ನು ಜನರ ಮುಂದೆ ಇಡುವ ಪ್ರಾಮಾಣಿಕ ಪ್ರಯತ್ನವನ್ನು ರಾಹುಲ್ ಗಾಂಧಿ ಅವರು ಮಾಡುತ್ತಿದ್ದು, ಅವರ ವಿರುದ್ಧ ಇಡಿ ತನಿಖೆ ಮಾಡಿಸಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಿರುವುದರಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಲಾಗಿದೆ ಎಂದು ಹೇಳಿದರು.


2014ರಲ್ಲಿ ಮೋದಿ ಅವರು ಪ್ರಧಾನಿಯಾದ ನಂತರ ಇದೇ ಸುಬ್ರಮಣಿಯನ್ ಸ್ವಾಮಿ ಅವರು ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಯಿಂದ ತನಿಖೆ ಮಾಡಿಸಲು ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆಯುತ್ತಾರೆ. ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಇದು ಕಾನೂನು ಚೌಕಟ್ಟಿನಲ್ಲಿ ಇತ್ಯರ್ಥವಾಗಲಿ ಎಂದು ಹೇಳಿದಾಗ 2015ರಲ್ಲಿ ಪ್ರಕರಣ ಖುಲಾಸೆಯಾಗುತ್ತದೆ. ಖುಲಾಸೆಯಾದ ಪ್ರಕರಣವನ್ನು ಮತ್ತೆ ಆರಂಭಿಸಿದ್ದಾರೆ. ದೆಹಲಿ ಹೈಕೋರ್ಟ್ ವಜಾಗೊಳಿಸಿದ ಪ್ರಕರಣವನ್ನು ಇಡಿ ಅವರು ಹೇಗೆ ಪ್ರಕರಣ ನಡೆಸುತ್ತಿದ್ದಾರೆ? ಇದು ರಾಜಕೀಯ ಷಡ್ಯಂತ್ರವಲ್ಲದೇ ಮತ್ತೇನು ಅಲ್ಲ ಎಂದು ಪ್ರಶ್ನಿಸಿದರು.


ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಡುತ್ತಿರುವ ರಾಹುಲ್ ಗಾಂಧಿ ಅವರ ಖ್ಯಾತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಭಯಭೀತರಾಗಿದ್ದು, ಈ ರೀತಿಯ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಗ್ರಪ್ಪ ಆರೋಪಿಸಿದರು.

Join Whatsapp
Exit mobile version